ರಾಜ್ಯ

ಹಾವೇರಿ: ಪಟಾಕಿ ಅಂಗಡಿಯಲ್ಲಿ ಬೆಂಕಿ ಅವಘಡ, ಅಗ್ನಿ ಶಾಮಕ ದಳ ದೌಡು, ಮೂವರು ಸಿಬ್ಬಂದಿ ನಾಪತ್ತೆ ಶಂಕೆ!

Srinivasamurthy VN

ಹಾವೇರಿ: ಪಟಾಕಿ ಅಂಗಡಿಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಕೋಟ್ಯಂತರ ಮೌಲ್ಯದ ಪಟಾಕಿ ಸುಟ್ಟು ಕರಕಲಾಗಿರುವ ಘಟನೆ ಹಾವೇರಿಯಲ್ಲಿ ಮಂಗಳವಾರ ನಡೆದಿದೆ.

ಹಾವೇರಿಯ ಹೊರವಲಯದ ಸಾತೇನಹಳ್ಳಿ ಬಳಿ ಕುಮಾರ್​ ಎಂಬುವವರಿಗೆ ಸೇರಿದ ಭೂಮಿಕಾ ಪಟಾಕಿ ಗೋದಾಮಿನಲ್ಲಿ ಈ ದುರಂತ ಸಂಭವಿಸಿದ್ದು, ಸುಮಾರು ಒಂದು ಕೋಟಿಗೂ ಹೆಚ್ಚು ಮೌಲ್ಯದ ಪಟಾಕಿ ದಾಸ್ತಾನು ಮಾಡಲಾಗಿತ್ತು. ಇದೀಗ ಏಕಾಏಕಿ ಅದಕ್ಕೆ ಬೆಂಕಿ ತಗುಲಿದ್ದು, ಅಪಾರ ಪ್ರಮಾಣ ವಸ್ತುಗಳು ಬೆಂಕಿಗಾಹುತಿಯಾಗಿದೆ. ಮೂಲಗಳ ಪ್ರಕಾರ ಇನ್ನು ಕೆಲವೇ ದಿನಗಳಲ್ಲಿ ಗಣೇಶ ಚತುರ್ಥಿ ಹಬ್ಬ ಬರುತ್ತಿದ್ದು, ಈ ಸಂದರ್ಭದಲ್ಲಿ ಪಟಾಕಿ ಮಾರಾಟ ಮಾಡಲು ಪಟಾಕಿಗಳನ್ನು ಶೇಖರಿಸಿಡಲಾಗಿತ್ತು ಎಂದು ಹೇಳಲಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಯವರು ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಇನ್ನು ಪಟಾಕಿ ಇಟ್ಟಿದ್ದ ಕಟ್ಟಡದ ಬಳಿ ವೆಲ್ಡಿಂಗ್​ ಕಾರ್ಯ ನಡೆಯುತ್ತಿತ್ತು. ಪರಿಣಾಮ ವೆಲ್ಡಿಂಗ್ ಮಾಡುವ ಸಂದರ್ಭದಲ್ಲಿ ಬೆಂಕಿ ಕಿಡಿ ತಗುಲಿರುವ ಶಂಕೆ ವ್ಯಕ್ತವಾಗಿದೆ. ಕಳೆದ ಮೂರು ಗಂಟೆಗಳಿಂದ ಬೆಂಕಿ ನಂದಿಸಲು ನಿರಂತರ ಪ್ರಯತ್ನ ಮಾಡುತ್ತಿದ್ದು, ಆದರೆ, ಬೆಂಕಿ ಮಾತ್ರ ಆರುತ್ತಿಲ್ಲ. ನಿರಂತರವಾಗಿ ಪಟಾಕಿ ಸಿಡಿಯುತ್ತಿದೆ.

ಇದುವರೆಗೂ ಎಂಟು ಆಗ್ನಿಶಾಮಕ ವಾಹನದಿಂದ ಬೆಂಕಿ ನಂದಿಸಲು ಪ್ರಯತ್ನ ಮಾಡಲಾಗಿದೆ. ಅದೃಷ್ಟವಶಾತ್​ ಒಳಗಡೆ ಇದ್ದ ಸಿಲಿಂಡರ್ ಹೊರತಂದಿದ್ದಕ್ಕೆ ಯಾವುದೇ ಅವಘಡ ಸಂಭವಿಸಿಲ್ಲ. ಈ ಘಟನೆ ಹಾವೇರಿ ಗ್ರಾಮಿಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪಟಾಕಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮೂವರು ನಾಪತ್ತೆ ಶಂಕೆ
ಇದೇ ಪಟಾಕಿ ಗೋಡೌನ್ ನಲ್ಲಿ ಕೆಲಸ ಮಾಡುತ್ತಿದ್ದ ಮೂವರು ನಾಪತ್ತೆಯಾದ ಬಗ್ಗೆ ಮಾಹಿತಿ ಬಂದಿದ್ದು, ಪೋನ್ ಸ್ವಿಚ್ ಅಫ್ ಆದ ಹಿನ್ನಲೆ ಆತಂಕ ಹೆಚ್ಚಾಗಿದೆ. ಬೆಂಕಿ ಬಿದ್ದ ತಕ್ಷಣ ಸ್ಥಳದಿಂದ ಓಡಿ ಹೋದರಾ? ಅಥವಾ ಒಳಗಡೆ ಇದ್ದರೆ ಎನ್ನುವ ಆತಂಕ ಎದುರಾಗಿದೆ. ದ್ಯಾಮಪ್ಪ ಓಲೇಕಾರ, ರಮೇಶ ಬಾರ್ಕಿ, ಶಿವಲಿಂಗ ಅಕ್ಕಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಎಂದು ಹೇಳಲಾಗಿದೆ. ಸತತ 4 ಗಂಟೆಯಿಂದ ನಿರಂತರ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ
ಪಟಾಕಿ ಅವಘಡ ಸ್ಥಳಕ್ಕೆ ಹಾವೇರಿ ಜಿಲ್ಲಾಧಿಕಾರಿ ರಘುನಂದಮೂರ್ತಿ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ‌ಗೋಡೌನ್​ಗೆ ಪರವಾನಗೆ ನೀಡಿದ್ದಾರೆಯೇ ಎಂಬ ತನಿಖೆ ನಡೆಯುತ್ತಿದ್ದು, ಪರವಾನಗೆ ಇರದೆ ಇದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ರಘುನಂದಮೂರ್ತಿ ಹೇಳಿದರು. ಅಗ್ನಿ ಅವಘಡ ವೇಳೆ ಓರ್ವ ಕಾರ್ಮಿಕನಿಗೆ ಗಾಯವಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ. ವಾಸಿಮ್ ಹರಿಹರ್(32) ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿ.

SCROLL FOR NEXT