ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ತನಿಖಾ ತಂಡಗಳು ನಿಗಮ ವ್ಯಾಪ್ತಿಯಲ್ಲಿ ಟಿಕೆಟ್ ರಹಿತ 2,748 ಪ್ರಯಾಣಿಕರಿಗೆ ದಂಡ ವಿಧಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಕೆಎಸ್‌ಆರ್‌ಟಿಸಿ, ನಿಗಮದ ತನಿಖಾ ತಂಡಗಳು ತಪಾಸಣಾ ಕಾರ್ಯವನ್ನು ಕೈಗೊಂಡು ಒಟ್ಟು2,748 ಪ್ರಯಾಣಿಕರಿಗೆ ದಂಡ ವಿಧಿಸಿವೆ” ಎಂದು ಹೇಳಿದೆ.
“ನಿಗಮದ ವ್ಯಾಪ್ತಿಯಲ್ಲಿ ಸಂಚರಿಸುವ 43,698 ವಾಹನಗಳನ್ನು ತನಿಖೆಗೊಳಪಡಿಸಿ, 2,748 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಇದರಂತೆ ಟಿಕೆಟ್ ರಹಿತ ಪ್ರಯಾಣಿಕರಿಂದ 4.46 ಲಕ್ಷ ರೂ ದಂಡವನ್ನು ವಸೂಲಿ ಮಾಡಲಾಗಿದೆ ಎಂದು ತಿಳಿಸಿದೆ.
ನಿಗಮದ ಆದಾಯದಲ್ಲಿ ಸೋರಿಕೆಯಾಗುತ್ತಿದ್ದ 63,914 ರೂ ಗಳನ್ನು ತನಿಖಾಧಿಕಾರಿಗಳು ಪತ್ತೆಹಚ್ಚಿದ್ದು, ತಪ್ಪಿತಸ್ಥರ ವಿರುದ್ಧ ಇಲಾಖಾ ರೀತ್ಯಾ ಸೂಕ್ತ ಶಿಸ್ತಿನ ಕ್ರಮವನ್ನು ಜರುಗಿಸಲಾಗಿದೆ” ಎಂದು ಮಾಹಿತಿ ನೀಡಿದೆ.