ರಾಜ್ಯ

ಹುಸಿಬಾಂಬ್ ಇಮೇಲ್ ಕಳುಹಿಸಿದವರನ್ನು ಪತ್ತೆಹಚ್ಚಲು ಸೂಚನೆ ನೀಡಿದ್ದೇನೆ: ಸಿಎಂ ಸಿದ್ದರಾಮಯ್ಯ

Sumana Upadhyaya

ಬೆಂಗಳೂರು: ನಗರದ ಕೆಲವು ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಇಮೇಲ್ ಕಳುಹಿಸಿದವರ ಮೂಲ ಪತ್ತೆಹಚ್ಚುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದೇನೆ. ಇಂತಹ ಘಟನೆಗಳು ಮರುಕಳಿಸಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಈ ಬಗ್ಗೆ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ನಗರದ ಹಲವು ಖಾಸಗಿ ಶಾಲೆಗಳಿಗೆ ಈ ರೀತಿ ಬಾಂಬ್ ಬೆದರಿಕೆ ಕರೆಗಳು ಪುನರಾವರ್ತನೆಯಾಗುತ್ತಿರುತ್ತವೆ. ಇಂತಹ ಘಟನೆಗಳು ನಡೆದರೆ ಪೋಷಕರು, ಮಕ್ಕಳು ಮತ್ತು ಶಾಲೆಯ ಶಿಕ್ಷಕರು, ಆಡಳಿತ ಮಂಡಳಿ ಆತಂಕಗೊಳ್ಳುತ್ತಾರೆ. ಇದು ಉತ್ತಮ ಬೆಳವಣಿಗೆಯಲ್ಲ. ಇಂತಹ ಹುಸಿ ಬಾಂಬ್ ಬೆದರಿಕೆಯನ್ನು ಯಾರು ಕಳುಹಿಸುತ್ತಾರೆ, ಎಲ್ಲಿಂದ ಬರುತ್ತವೆ ಎಂದು ಪತ್ತೆಹಚ್ಚುವಂತೆ ಹೇಳಿದ್ದೇನೆ ಎಂದರು.

ಸಿಲಿಕಾನ್ ಸಿಟಿ ಬೆಂಗಳೂರಿನ 15ಕ್ಕೂ ಹೆಚ್ಚು ಖಾಸಗಿ ಶಾಲೆಗಳಿಗೆ ಇಂದು ಬೆಳ್ಳಂಬೆಳಗ್ಗೆ ಬಾಂಬ್ ಬೆದರಿಕೆ ಹಾಕಲಾಗಿದೆ. ಬಸವೇಶ್ವರ ನಗರದ ಖಾಸಗಿ ಶಾಲೆಗಳಿಗೆ ಹಾಗೂ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಶಾಲೆಗೂ ಕಿಡಿಗೇಡಿಗಳು ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಿದ್ದಾರೆ. ಬಾಂಬ್ ಬೆದರಿಕೆಯ ಹಿನ್ನೆಲೆಯಲ್ಲಿ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಮಕ್ಕಳನ್ನು ಶಾಲೆಯಿಂದ ಮನೆಗೆ ವಾಪಸ್ ಕಳುಹಿಸಿದ್ದಾರೆ. ಆತಂಕಗೊಂಡ ಪೋಷಕರು ಶಾಲೆ ಬಳಿ ಓಡೋಡಿ ಬಂದು ತಮ್ಮ-ತಮ್ಮ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗುತ್ತಿದ್ದಾರೆ. ಸದಾಶಿವನಗರದಲ್ಲಿರುವ ನೀವ್ ಅಕಾಡೆಮಿ ಶಾಲೆಗೆ ರಜೆ ನೀಡಲಾಗಿದೆ. ನೀವ್ ಅಕಾಡೆಮಿ ಶಾಲೆಗೆ ಇಂದು ಆಡಳಿತ ಮಂಡಳಿ ರಜೆ ಘೋಷಿಸಿದೆ.

ಕಳೆದ ವರ್ಷದಿಂದ ನಿರಂತರವಾಗಿ ಈ ರೀತಿ ಹುಸಿ ಬಾಂಬ್ ಬೆದರಿಕೆ ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ವರ್ಷ ಒಂದೇ ದಿನ 30 ಶಾಲೆಗಳಿಗೆ ಇ-ಮೇಲ್ ಬೆದರಿಕೆ ಹಾಕಲಾಗಿತ್ತು. ಆದರೂ ಸಹ ಈವರೆಗೂ ಬಾಂಬ್ ಬೆದರಿಕೆ ಹಾಕಿರುವವರ ಬಂಧನವಾಗಿಲ್ಲ. 

SCROLL FOR NEXT