ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಶೀಘ್ರದಲ್ಲೇ ದೇಶದ ಮೊದಲ ಬಿದಿರಿನ ಪ್ರವಾಸಿ ಸೌಧವೊಂದು ತಲೆ ಎತ್ತಲಿದ್ದು, ಕಟ್ಟಣ ನಿರ್ಮಾಣಕ್ಕೆ ಮುಖ್ಯಮಂತ್ರಿಗಳು ಒಂದು ವರ್ಷದ ಗಡುವು ನಿಗದಿಪಡಿಸಿದ್ದಾರೆ.
ನಗರದ ಹಲಸೂರು ಕೆರೆ ಸಮೀಪದಲ್ಲಿ ಬಿದಿರಿನ ಪ್ರವಾಸಿ ಸೌಧ ನಿರ್ಮಾಣವಾಗುತ್ತಿತ್ತು, ಕಟ್ಟಡ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಶಂಕು ಸ್ಥಾಪನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಗೋವಿಂದರಾಜ್, ಶಾಸಕ ರಿಜ್ವಾನ್ ಅರ್ಷದ್, ಸೇರಿದಂತೆ ಮತ್ತಿತತರು ಉಪಸ್ಥಿತರಿದ್ದರು.
18 ಕೋಟಿ ವೆಚ್ಚದಲ್ಲಿ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್‌ನಿಂದ ಕಟ್ಟಡ ನಿರ್ಮಾಣವಾಗುತ್ತಿದೆ. ಕಟ್ಟಡ ನಿರ್ಮಾಣ ಪೂರ್ಣಗೊಂಡ ನಂತರ ರಾಜ್ಯ ಸರ್ಕಾರ ಹಾಲಿ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರವಾಸೋದ್ಯಮ ಇಲಾಖೆಯ ಎಲ್ಲಾ ಅಧೀನದ ಎಲ್ಲಾ ಕಚೇರಿಗಳನ್ನು ಒಂದೇ ಸೂರಿನಡಿ ತಂದು ಕಾರ್ಯ ನಿರ್ವಹಿಸುವಂತೆ ಮಾಡಲಿದೆ.
ಕಟ್ಟಡಕ್ಕೆ ಶಂಕು ಸ್ಥಾಪನೆ ನೆರವೇರಿಸಿದ ಬಳಿಕ ಮಾತನಾಡಿದ ಸಿದ್ದರಾಮಯ್ಯ ಅವರು, ಇಂತಹ ಕಟ್ಟಡ ನಿರ್ಮಾಣವಾಗುತ್ತಿರುವುದು ಇದೇ ಮೊದಲು. ನಿರ್ಮಾಣ ಕಾರ್ಯ ಪೂರ್ಣಗೊಳ್ಳಲು ಒಂದು ವರ್ಷ ಗಡುವು ನಿಗದಿಪಡಿಸಲಾಗಿದೆ ಎಂದು ಹೇಳಿದರು.
ಕಟ್ಟಡವನ್ನು ಬಿದಿರಿನ ಮರದಿಂದ ವಿನ್ಯಾಸಗೊಳಿಸಲಾಗುತ್ತಿದೆ. ಇದು ನೀರು, ಬೆಂಕಿ ಮತ್ತು ಗೆದ್ದಲು ನಿರೋಧಕವಾಗಿರುತ್ತದೆ. ಕಟ್ಟಡ ನಿರ್ಮಾಣಕ್ಕೆ ಬಿದಿರನ್ನು ಬಳಕೆ ಮಾಡುತ್ತಿರುವುದರಿಂದ ಇದು ನಿರ್ಮಾಣ ಸಮಯನ್ನು ಶೇ.50ರಷ್ಟು ಕಡಿಮೆ ಮಾಡುತ್ತದೆ. ಅಲ್ಲದೆ, ನಿರ್ಮಾಣದಲ್ಲಿ ಮೂರು ಮಿಲಿಯನ್ ಲೀಟರ್ ನೀರನ್ನೂ ಕೂಡ ಉಳಿಸುತ್ತದೆ. ಅಲ್ಲದೆ, ಮಿಂಚು ಮತ್ತು ಭೂಕಂಪ ನಿರೋಧಕವಾಗಿಯೂ ಈ ಕಟ್ಟಡ ಇರುತ್ತದೆ.