ರಾಜ್ಯ

ವಕೀಲರು - ಪೊಲೀಸರ ನಡುವೆ ಸಂಘರ್ಷ: 10 ಸದಸ್ಯರ ಸಮಿತಿ ರಚಿಸಿದ ಹೈಕೋರ್ಟ್

Lingaraj Badiger

ಬೆಂಗಳೂರು: ಚಿಕ್ಕಮಗಳೂರು ಘರ್ಷಣೆ ನಂತರ ವಕೀಲರು, ಪೊಲೀಸರು ಮತ್ತು ಆಡಳಿತದ ನಡುವೆ ಉದ್ಭವಿಸಿರುವ ಭಿನ್ನಾಭಿಪ್ರಾಯಗಳನ್ನು ನಿವಾರಿಸಲು ಕರ್ನಾಟಕ ಹೈಕೋರ್ಟ್ ಗುರುವಾರ 10 ಸದಸ್ಯರ ಉನ್ನತ ಮಟ್ಟದ ಸಮಿತಿ ರಚಿಸಿದೆ.

ಸಮಿತಿಯಲ್ಲಿ ಅಡ್ವೊಕೇಟ್ ಜನರಲ್, ಕರ್ನಾಟಕ ಡಿಜಿಪಿ ಮತ್ತು ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಇದ್ದಾರೆ.

ಚಿಕ್ಕಮಗಳೂರಿನಲ್ಲಿ ವಕೀಲರೊಬ್ಬರಿಗೆ ಪೊಲೀಸರು ಥಳಿಸಿದ ಪ್ರಕರಣದ ಕುರಿತು ಸ್ವಯಂಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ, 10 ಸದಸ್ಯರ ಸಮಿತಿ ರಚಿಸಿ ಆದೇಶಿಸಿದೆ.

ವಕೀಲರು ಮತ್ತು ಪೊಲೀಸರ ನಡುವಿನ ಸಂಘರ್ಘದಿಂದ ಚಿಕ್ಕಮಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಮತ್ತು ರಾಜ್ಯ ಸರ್ಕಾರ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದೆ.

ತನಿಖಾ ಸಂಸ್ಥೆಯು ತನ್ನ ಕೆಲಸವನ್ನು ಮಾಡಲಿದೆ. ಅದರ ಜೊತೆಗೆ ಹೆಚ್ಚುವರಿಯಾಗಿ ಹಿರಿಯ ವಕೀಲರ ಸಲಹೆಯಂತೆ ಸಮಿತಿ ರಚಿಸಲಾಗಿದ್ದು, ಈ ವಿಷಯವನ್ನು ಚರ್ಚಿಸಲು ಮತ್ತು ಸೌಹಾರ್ದಯುತ ವಾತಾವರಣವನ್ನು ಸೃಷ್ಟಿಸಲು ಹಾಗೂ ಸೌಹಾರ್ದತೆಯನ್ನು ಪುನಃಸ್ಥಾಪಿಸಲು ಒಂದೇ ಸ್ಥಳದಲ್ಲಿ ಸೇರಬೇಕು. ಹೀಗಾಗಿ ವಕೀಲರು, ಪೊಲೀಸರು ಮತ್ತು ಜಿಲ್ಲಾಡಳಿತ ಒಳಗೊಂಡ ಸಮಿತಿ ರಚಿಸಲಾಗಿದೆ.

ಹಿರಿಯ ವಕೀಲ ಮತ್ತು ಮಾಜಿ ಅಡ್ವೊಕೇಟ್ ಜನರಲ್ ಉದಯ್ ಹೊಳ್ಳ, ಹಿರಿಯ ವಕೀಲರಾದ ಜಯಕುಮಾರ್ ಎಸ್ ಪಾಟೀಲ್, ವಿ ಲಕ್ಷ್ಮೀನಾರಾಯಣ, ಕೆಎನ್ ಫಣೀಂದ್ರ, ಡಿ ಆರ್ ರವಿಶಂಕರ್, ಬೆಂಗಳೂರಿನ ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಮತ್ತು ಚಿಕ್ಕಮಗಳೂರು ವಕೀಲರ ಸಂಘದ ಅಧ್ಯಕ್ಷ ಆಜಾದ್ ಅಲಿ ಖಾನ್ ಅವರು ಈ ಸಮಿತಿಯ ಸದಸ್ಯರಾಗಿದ್ದಾರೆ.

ಡಿಸೆಂಬರ್ 9ರಂದು ಬೆಳಗ್ಗೆ 11 ಗಂಟೆಗೆ ಅಡ್ವೊಕೇಟ್ ಜನರಲ್ ಕಚೇರಿಯಲ್ಲಿ ಸಭೆ ನಡೆಸುವಂತೆ ಸಮಿತಿಗೆ ಸೂಚಿಸಲಾಗಿದೆ. ನಂತರ ಅದು ತನ್ನ ಶಿಫಾರಸುಗಳನ್ನು ಹೈಕೋರ್ಟ್‌ಗೆ ಸಲ್ಲಿಸಲಿದೆ.

ನವೆಂಬರ್ 30 ರಂದು ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ವಕೀಲ ಪ್ರೀತಂ ಅವರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದರು. ಘಟನೆಗೆ ಸಂಬಂಧಿಸಿದಂತೆ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸೇರಿದಂತೆ ಆರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.

SCROLL FOR NEXT