ರಾಜ್ಯ

ಕ್ಷುಲ್ಲಕ ಕಾರಣಕ್ಕೆ ಜಗಳ: ರಾಸಾಯನಿಕ ಎಸೆದ ಮನೆಯೊಡತಿ, ಬಾಲಕಿಗೆ ಶೇ.40ರಷ್ಟು ಸುಟ್ಟಗಾಯ!

Manjula VN

ಬೆಂಗಳೂರು: ಕ್ಷುಲ್ಲಕ ವಿಚಾರಕ್ಕೆ ಬಾಡಿಗೆ ಮನೆಯವರು ಹಾಗೂ ಮಾಲೀಕರ ನಡುವೆ ನಡೆದ ಜಗಳಕ್ಕೆ 14 ವರ್ಷದ ಬಾಲಕಿಯೊಬ್ಬಳು ಬೆಲೆ ತೆತ್ತಿದ್ದಾಳೆ.

ಬಾಡಿಗೆದಾರರ ಮೇಲಿದ್ದ ಕೋಪವನ್ನು ಮನೆಯೊಡತಿ ಅವರ ಪುತ್ರಿ ಮೇಲೆ ತೋರಿಸಿದ್ದು, ಆಕೆಯ ಬಲಗಾಲಿಗೆ ರಾಸಾಯನಿಕ ಎರಚಿ ಕೋಪವನ್ನು ತೀರಿಸಿಕೊಂಡಿದ್ದಾಳೆ.

ಪ್ರೌಢಶಾಲಾ ವಿದ್ಯಾರ್ಥಿನಿಯಾಗಿರುವ ಬಾಲಕಿ ಇದೀಗ ಶೇ.40ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿದ್ದು, ವಿಕ್ಟೋರಿಯಾ ಆಸ್ಪತ್ರೆಯ ಸುಟ್ಟಗಾಯಗಳ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಚಂದ್ರಾ ಲೇಔಟ್ ಪೊಲೀಸ್ ವ್ಯಾಪ್ತಿಯ ಮೆಟ್ರೋ ಲೇಔಟ್ ನಿವಾಸಿ ಝಾಕಿರಾ ಭಾನು (46) ಅವರ ಪುತ್ರಿ ಉಮ್ಮೆ ಕುಲ್ಸುಮ್ ಎಂದು ಸುಟ್ಟ ಗಾಯಗಳಿಂದ ಬಳಲುತ್ತಿರುವ ಬಾಲಕಿಯಾಗಿದ್ದಾಳೆ.

7 ತಿಂಗಳ ಹಿಂದೆ ಮನೆಯನ್ನು ಸ್ಥಳಾಂತರಿಸಲಾಗಿತ್ತು. ಮನೆಗೆ ಬಂದಾಗಿನಿಂದಲೂ ಮನೆಯೊಡತಿಯಿಂದ ಸಮಸ್ಯೆಗಳನ್ನು ಎದುರಿಸುತ್ತಲೇ ಇದ್ದೆವು. ಕ್ಷುಲ್ಲಕ ಕಾರಣಕ್ಕೆ ನಮ್ಮೊಂದಿಗೆ ಜಗಳ ಮಾಡುತ್ತಲೇ ಇದ್ದರು.

ಮನೆಗೆ ಬರುತ್ತಿದ್ದ ಬೆಕ್ಕು ಹಾಗೂ ಇತರೆ ಸಾಕು ಪ್ರಾಣಿಗಳ ಮೇಲೂ ರಾಸಾಯನಿಕವನ್ನು ಎರಚುತ್ತಿದ್ದರು. ಇದರಿಂದ ಬೇಸತ್ತು ಹೋಗಿದ್ದೆವು. ಮನೆ ಖಾಲಿ ಮಾಡಬೇಕೆಂದು ನಿರ್ಧರಿಸಿದ್ದೆವು. ಆದರೆ, ಆಕೆ ಹಣವನ್ನು ವಾಪಸ್ ಕೊಡುತ್ತಿರಲಿಲ್ಲ. ನಾವು ಮೊದಲು ಮನೆ ಖಾಲಿ ಮಾಡಬೇಕು ಎಂದು ಹೇಳುತ್ತಿದ್ದರು. ಮನೆ ಖಾಲಿ ಮಾಡಿದರೆ ಎಲ್ಲಿ ಹಣ ಕೊಡುವುದಿಲ್ಲವೋ ಎಂಬ ಭಯ ನಮಗಿತ್ತು. ಆಕೆ ಎಲ್ಲಿ ಹೋದರೂ ತನ್ನೊಂದಿಗೆ ನನ್ನ ಮಕ್ಕಳು ಹೋಗಬೇಕೆಂದು ಬಯಸುತ್ತಿದ್ದಳು. ಆದರೆ, ಆಕೆಯೊಂದಿಗೆ ಮಕ್ಕಳನ್ನು ಕಳುಹಿಸಲು ನಮಗೆ ಭಯವಾಗುತ್ತಿತ್ತು. ಮಕ್ಕಳನ್ನು ಆಕೆಯೊಂದಿಗೆ ಕಳುಹಿಸುವುದಿಲ್ಲ ಎಂದು ಹೇಳಿದಾಗ ಸಮಸ್ಯೆ ಮತ್ತಷ್ಟು ಉಲ್ಭಣಗೊಂಡಿತ್ತು.

ನನ್ನ ಮಗಳ ಕಾಲಿಗೆ ಆಕೆ ರಾಸಾಯನಿಕವನ್ನು ಎರಚಿದ್ದಾಳೆ. ಉರಿಯಿಂದ ಮಗಳು ಕೂಗಿಕೊಂಡು ಮನೆಗೆ ಬಂದಿದ್ದಳು. ಕೂಡಲೇ ಆಕೆಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಯಿತು. ಇದೀಗ ಮನೆಯೊಡತಿ ಪೂಜಾ ಗೌಡ ಅವರ ವಿರುದ್ಧ ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆಂದು ಬಾಲಕಿಯ ತಾಯಿ ಭಾನು ಅವರು ಹೇಳಿದ್ದಾರೆ.

ಬಾಲಕಿಯ ಮೇಲೆ ಯಾವ ರೀತಿಯ ರಾಸಾಯನಿಕವನ್ನು ಎರಚಲಾಗಿದೆ ಎಂಬುದು ತಿಳಿದುಬಂದಿಲ್ಲ. ಮನೆ ಖಾಲಿ ಮಾಡಲು ಮಧ್ಯಸ್ಥಿಕೆ ವಹಿಸುವಂತೆ ಬಾಲಕಿಯ ತಾಯಿ ಮನವಿ ಮಾಡಿಕೊಂಡಿದ್ದಾರೆ. ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

SCROLL FOR NEXT