ಆರ್‌ ಡಿ ಪಾಟೀಲ್‌ 
ರಾಜ್ಯ

ಪಿಎಸ್ಐ ಹಗರಣ: ಆರ್‌ ಡಿ. ಪಾಟೀಲ್‌ ವಿರುದ್ಧದ 11 ಎಫ್‌ಐಆರ್‌ ವಿಲೀನ ಕೋರಿಕೆ ಅರ್ಜಿ ವಜಾ

ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ (ಪಿಎಸ್‌ಐ) ನೇಮಕಾತಿ ಹಗರಣದ ಕಿಂಗ್‌ಪಿನ್‌ ರುದ್ರಗೌಡ ಪಾಟೀಲ್‌ ಅಲಿಯಾಸ್‌ ಆರ್‌ ಡಿ ಪಾಟೀಲ್‌ ತನ್ನ ವಿರುದ್ಧ ವಿವಿಧ ಕಡೆ ದಾಖಲಾಗಿರುವ 11 ಎಫ್‌ಐಆರ್‌ ಮತ್ತು ಆರೋಪ ಪಟ್ಟಿಯನ್ನು ವಿಲೀನಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ನ ಕಲಬುರಗಿ ಪೀಠವು ವಜಾ ಮಾಡಿದೆ.

ಬೆಂಗಳೂರು: ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ (ಪಿಎಸ್‌ಐ) ನೇಮಕಾತಿ ಹಗರಣದ ಕಿಂಗ್‌ಪಿನ್‌ ರುದ್ರಗೌಡ ಪಾಟೀಲ್‌ ಅಲಿಯಾಸ್‌ ಆರ್‌ ಡಿ ಪಾಟೀಲ್‌ ತನ್ನ ವಿರುದ್ಧ ವಿವಿಧ ಕಡೆ ದಾಖಲಾಗಿರುವ 11 ಎಫ್‌ಐಆರ್‌ ಮತ್ತು ಆರೋಪ ಪಟ್ಟಿಯನ್ನು ವಿಲೀನಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ನ ಕಲಬುರಗಿ ಪೀಠವು ವಜಾ ಮಾಡಿದೆ.

ಕಲಬುರ್ಗಿ, ಬೆಂಗಳೂರು, ಧಾರವಾಡ ಮತ್ತು ತುಮಕೂರಿನ ವಿವಿಧ ಠಾಣೆಗಳಲ್ಲಿ ವಿವಿಧ ಆರೋಪಕ್ಕೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ದಾಖಲಾಗಿರುವ 11 ಎಫ್‌ಐಆರ್‌ ಹಾಗೂ ಆರೋಪ ಪಟ್ಟಿ ಒಗ್ಗೂಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ ನಟರಾಜನ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಆದೇಶ ಪ್ರಕಟಿಸಿದೆ.

ಇದರೊಂದಿಗೆ ಆರ್‌ ಡಿ ಪಾಟೀಲ್‌ ವಿರುದ್ಧದ 11 ಎಫ್‌ಐಆರ್‌ಗಳಿಗೆ ತಡೆಯಾಜ್ಞೆ ನೀಡಿ ಹೈಕೋರ್ಟ್‌ 2023ರ ಏಪ್ರಿಲ್‌ 17ರಂದು ಮಾಡಿದ್ದ ಮಧ್ಯಂತರ ಆದೇಶವು ತೆರವಾಗಿದೆ. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.

ಕಲಬುರ್ಗಿ ನಗರದ ಅಶೋಕ್‌ ನಗರ ಠಾಣೆಯಲ್ಲಿ ಐದು, ಸ್ಟೇಷನ್‌ ಬಜಾರ್‌ ಠಾಣೆಯಲ್ಲಿ ಎರಡು, ಚೌಕ್‌ ಠಾಣೆಯಲ್ಲಿ ಒಂದು ಹಾಗೂ ಧಾರವಾಡದ ಸಬ್‌ ಅರ್ಬನ್‌, ತುಮಕೂರಿನ ಕ್ಯಾತಸಂದ್ರ ಹಾಗೂ ಬೆಂಗಳೂರಿನ ರಾಮಮೂರ್ತಿ ನಗರ ಠಾಣೆಗಳಲ್ಲಿ ದಾಖಲಾಗಿರುವ ತಲಾ ಒಂದೊಂದು ಎಫ್‌ಐಆರ್‌ ಮತ್ತು ಆರೋಪ ಪಟ್ಟಿಯನ್ನು ಒಟ್ಟಾಗಿಸಬೇಕು ಎಂದು ಆರ್‌ ಡಿ ಪಾಟೀಲ್‌ ಕೋರಿದ್ದರು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕರಾದ ಬಿ ಎನ್‌ ಜಗದೀಶ್‌ ಅವರು "ಆರೋಪಿಯ ವಿರುದ್ಧ ದಾಖಲಿಸಿರುವ ಎಫ್‌ಐಆರ್‌ಗಳಲ್ಲಿ ಅಪರಾಧ ಕೃತ್ಯಗಳು ಬೇರೆಬೇರೆ ಇವೆ. ಅಪರಾಧ ವರದಿಯಾಗಿರುವ ಸ್ಥಳವೂ ಬೇರೆಬೇರೆಯಾಗಿದೆ. ಹಗರಣದಲ್ಲಿ ಭಾಗಿಯಾಗಿರುವ ಆರೋಪಿಗಳೂ ಬೇರೆಬೇರೆಯಾಗಿದ್ದಾರೆ. ಆರ್‌ ಡಿ ಪಾಟೀಲ್‌ ಎಲ್ಲಾ ಪ್ರಕರಣಗಳಲ್ಲಿ ಇದ್ದಾರೆ ಎಂದ ಮಾತ್ರಕ್ಕೆ ಎಲ್ಲವನ್ನೂ ಒಂದೇ ಪ್ರಕರಣವನ್ನಾಗಿ ಮಾಡಲಾಗದು. ನಾಲ್ಕು ಜಿಲ್ಲೆಗಳಲ್ಲಿ ಆರೋಪಿಯ ವಿರುದ್ಧ ಪ್ರಕರಣಗಳು ದಾಖಲಾಗಿವೆ" ಎಂದು ವಾದಿಸಿದ್ದರು.

ಅರ್ಜಿದಾರರ ಪರ ವಕೀಲರು "ಆರ್‌ ಡಿ ಪಾಟೀಲ್‌ ವಿರುದ್ಧ ಬೇರೆಬೇರೆ ಕಡೆ ದಾಖಲಾಗಿರುವ ಎಫ್‌ಐಆರ್‌ಗಳು ಒಂದೇ ಪರೀಕ್ಷೆಗೆ ಸಂಬಂಧಿಸಿವೆ. ಇವೆಲ್ಲವೂ ಒಂದೇ ಅಪರಾಧವಾಗಿರುವುದರಿಂದ ಪ್ರತ್ಯೇಕ ಎಫ್‌ಐಆರ್‌ ಅಗತ್ಯವಿಲ್ಲ" ಎಂದು ವಾದಿಸಿದ್ದರು. ಇದನ್ನು ನ್ಯಾಯಾಲಯ ಪುರಸ್ಕರಿಸಿಲ್ಲ.

ಪಿಎಸ್‌ಐ ಹಗರಣಕ್ಕೆ ಸಂಬಂಧಿಸಿದಂತೆ ಕಲಬುರ್ಗಿಯ ಚೌಕ್‌ ಬಜಾರ್‌ ಠಾಣೆಯಲ್ಲಿ ದಾಖಲಾಗಿರುವ ಪ್ರಧಾನ ಪ್ರಕರಣದಲ್ಲಿ ಅರ್ಜಿದಾರ ಆರ್‌ ಡಿ ಪಾಟೀಲ್‌ ಅವರನ್ನು 14ನೇ ಆರೋಪಿಯನ್ನಾಗಿಸಲಾಗಿದೆ. ಈಚೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ್ದ ಪ್ರಥಮ ದರ್ಜೆ ಮತ್ತು ದ್ವಿತೀಯ ದರ್ಜೆ ಸಹಾಯಕರ ಪರೀಕ್ಷೆ ಅಕ್ರಮ ಪ್ರಕರಣದಲ್ಲಿ ಆರ್‌ ಡಿ ಪಾಟೀಲ್‌ ಬಂಧನವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT