ರಾಜ್ಯ

ಊಹಾಪೋಹದ ಮೇಲೆ ಜಾತಿಗಣತಿ ವರದಿ ವಿರೋಧಿಸುವುದು ಸರಿಯಲ್ಲ: ಸಚಿವ ಪರಮೇಶ್ವರ್

Manjula VN

ಬೆಂಗಳೂರು: ಕೇವಲ ಊಹಾಪೋಹದ ಮೇಲೆ ಜಾತಿಗಣತಿ ವರದಿ ವಿರೋಧಿಸುವುದು ಸರಿಯಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಭಾನುವಾರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದುಳಿದ ವರ್ಗದಲ್ಲಿ ನೂರಕ್ಕೂ ಅಧಿಕ ಜಾತಿಗಳಿವೆ. ಕೆಲವು ಜಾತಿಗಳಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಸಮರ್ಪಕವಾಗಿ ಮೀಸಲಾತಿ ಲಬಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಆದ್ದರಿಂದ ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಕಾಂತರಾಜು ಅವರ ಅಧ್ಯಕ್ಷತೆಯಲ್ಲಿ ಆಯೋಗ ರಚಿಸಿದ್ದರು. ಸರ್ಕಾರ ತೀರ್ಮಾನ ಮಾಡಿ, ಜಾತಿ ಗಣತಿಗೆ ಹಣ ಖರ್ಚು ಮಾಡಿದೆ. ವರದಿಯ ಇಂಪ್ಯಾಕ್ಟ್ ಬಗ್ಗೆ, ಬೇರೆಬೇರೆ ತೀರ್ಮಾನಗಳ ಬಗ್ಗೆ ಪ್ರತಿಭಟಿಸಿ, ಸಲಹೆಗಳನ್ನು ನೀಡಲಿ. ಇದಕ್ಕೆ ತಕರಾರು ಏನು ಇಲ್ಲ. ಆದರೆ, ಆಯೋಗ ನೀಡಿರುವ ವರದಿಯಲ್ಲಿ ಏನಿದೆ ಎಂದು ಊಹಿಸಿಕೊಂಡು ವರದಿ ಜಾರಿಯಾಗಬಾರದು ಎನ್ನುವುದು ಸರಿಯಲ್ಲ ಎಂದು ಹೇಳಿದರು.

ದೇವಾಂಗ ಸಮುದಾಯದ ಮಕ್ಕಳು ಇಂಜನಿಯರಿಂಗ್, ವೈದ್ಯಕೀಯ, ಕಾನೂನು‌ ಪದವಿ‌ ಸೇರಿದಂತೆ ಉನ್ನತ ಶಿಕ್ಷಣ ಪಡೆದುಕೊಳ್ಳಬೇಕು. ಐಎಎಸ್, ಐಪಿಎಸ್ ಸೇರಿದಂತೆ ದೇಶದ ಉನ್ನತ ಹುದ್ದೆಗಳನ್ನು‌ ಅಲಂಕರಿಸಬೇಕು. ನಿಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಸುಸಜ್ಜಿತ ಹಾಸ್ಟೆಲ್‌ ಅವಶ್ಯಕತೆಯಿದ್ದು ಮುಖ್ಯಮಂತ್ರಿ ಗಳ ಗಮನಕ್ಕೆ ಈ ವಿಷಯ ತರುತ್ತೇನೆ ಎಂದು ಭರವಸೆ ನೀಡಿದರು.

ಜನರನ್ನು ಮಲದ ಗುಂಡಿಗೆ ಇಳಿಸಿ, ಸ್ವಚ್ಛತೆ ಮಾಡಿಸುವುದನ್ನು ಈ ಹಿಂದೆ ದೇವರಾಜ ಅರಸು ಅವರ ಅವಧಿಯಲ್ಲಿ ಬವಸಲಿಂಗಪ್ಪನವರು ನಿಷೇಧಿಸಿದ್ದಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಯಲುವನಹಳ್ಳಿಯ ಮೋರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಲದ ಗುಂಡಿ ಸ್ವಚ್ಛತೆಗೆ ಶಾಲಾ ಮಕ್ಕಳನ್ನು ಬಳಸಿಕೊಂಡದ್ದು ಖಂಡನೀಯ. ಹಾಸ್ಟೆಲ್ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇದೇ ವೇಳೆ ತಿಳಿಸಿದರು.

SCROLL FOR NEXT