ಪ್ರಧಾನಿ ಭೇಟಿ ಮಾಡಿದ ಸಿಎಂ ಸಿದ್ದರಾಮಯ್ಯ 
ರಾಜ್ಯ

ಪ್ರಧಾನಿ ಮೋದಿ ಭೇಟಿ ಮಾಡಿದ ಸಿಎಂ ಸಿದ್ದರಾಮಯ್ಯ: ರಾಜ್ಯದ ಬರ ಪರಿಸ್ಥಿತಿ ಬಗ್ಗೆ ಚರ್ಚೆ, ಪರಿಹಾರಕ್ಕೆ ಮನವಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ನವದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ರಾಜ್ಯದ ಬರ ಪರಿಸ್ಥಿತಿಯ ಕುರಿತು ವಿವರಿಸಿ, ಶೀಘ್ರವೇ 18,177 ಕೋಟಿ ರೂ. ಪರಿಹಾರ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ.

ನವದೆಹಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ನವದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ರಾಜ್ಯದ ಬರ ಪರಿಸ್ಥಿತಿಯ ಕುರಿತು ವಿವರಿಸಿ, ಶೀಘ್ರವೇ 18,177 ಕೋಟಿ ರೂ. ಪರಿಹಾರ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ.

ಇದರಲ್ಲಿ 4,663 ಕೋಟಿ ರೂ. ಇನ್‌ಪುಟ್‌ ಸಬ್ಸಿಡಿ, 12,577 ಕೋಟಿ ರೂ. ತುರ್ತು ಪರಿಹಾರ, 566 ಕೋಟಿ ರೂ. ಕುಡಿಯುವ ನೀರಿಗಾಗಿ ಹಾಗೂ 363 ಕೋಟಿ ರೂ. ಜಾನುವಾರುಗಳ ಸಂರಕ್ಷಣೆಗಾಗಿ ಒದಗಿಸುವಂತೆ ಕೋರಲಾಗಿದೆ.

ರಾಜ್ಯದಲ್ಲಿ 236 ತಾಲೂಕುಗಳ ಪೈಕಿ 223 ತಾಲ್ಲೂಕುಗಳು ಬರಪೀಡಿತವಾಗಿದ್ದು, ಅದರಲ್ಲಿ 196 ತಾಲ್ಲೂಕುಗಳಲ್ಲಿ ಬರದ ತೀವ್ರತೆ ಹೆಚ್ಚಾಗಿದೆ. ಇದರಿಂದಾಗಿ 48.19 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಕೃಷಿ ಮತ್ತು ತೋಟಗಾರಿಕಾ ಬೆಳೆಗಳು ನಷ್ಟವಾಗಿದ್ದು, ಇದರಿಂದ ಹೆಚ್ಚಿನ ಸಂಖ್ಯೆಯ ಸಣ್ಣ ಮತ್ತು ಅತಿ ಸಣ್ಣ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಎನ್‌.ಡಿ.ಆರ್‌.ಎಫ್. ನಿಂದ 4,663 ಕೋಟಿ ರೂ. ಇನ್‌ಪುಟ್‌ ಸಬ್ಸಿಡಿ ಒದಗಿಸುವಂತೆ ಮನವಿ ಮಾಡಿದ್ದಾರೆ.

ರೈತರಿಗೆ ಇನ್‌ಪುಟ್‌ ಸಬ್ಸಿಡಿ ನೀಡಲು 2015-16 ರ ಕೃಷಿ ಗಣತಿಯನ್ನು ಪರಿಗಣಿಸಲಾಗುತ್ತಿದ್ದು, ಇದು 8 ವರ್ಷ ಹಳೆಯ ಮಾಹಿತಿಯಾಗಿದೆ. ಅಲ್ಲದೆ, ರಾಜ್ಯದಲ್ಲಿ ರೈತರ ದತ್ತಾಂಶವನ್ನು ಫ್ರೂಟ್ಸ್‌ ತಂತ್ರಾಂಶದಲ್ಲಿ ದಾಖಲಿಸಲಾಗಿದ್ದು, ಪಿಎಂ-ಕಿಸಾನ್‌ ಯೋಜನೆಗೆ ಇದನ್ನು ಪರಿಗಣಿಸಲಾಗುತ್ತಿದೆ. ಇದರನ್ವಯ ರಾಜ್ಯದಲ್ಲಿ 83 ಲಕ್ಷ ಜನ ಸಣ್ಣ ಮತ್ತು ಅತಿ ಸಣ್ಣ ರೈತರಿದ್ದು, ಪರಿಹಾರ ವಿತರಣೆಗೆ ಈ ದತ್ತಾಂಶವನ್ನು ಪರಿಗಣಿಸುವಂತೆ ಮನವಿ ಮಾಡಿದ್ದೇನೆ. ಜೊತೆಗೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಬರಪೀಡಿತ ತಾಲ್ಲೂಕುಗಳಲ್ಲಿ ಉದ್ಯೋಗದ ದಿನಗಳನ್ನು 100 ರಿಂದ 150 ದಿನಗಳಿಗೆ ಹೆಚ್ಚಿಸುವಂತೆ  ಆಗ್ರಹಿಸಿರುವುದಾಗಿ ತಿಳಿಸಿದ್ದಾರೆ.

ಬರ ಪರಿಹಾರಕ್ಕಾಗಿ ರಾಜ್ಯದ ಮೊದಲ ಪ್ರಸ್ತಾವನೆಯನ್ನು ಕೇಂದ್ರ ಕೃಷಿ ಸಚಿವಾಲಯಕ್ಕೆ ದಿನಾಂಕ 22-09-2023 ರಂದ ಸಲ್ಲಿಸಲಾಗಿತ್ತು ಭಾರತ ಸರ್ಕಾರದ ಬರ ಅಧ್ಯಯನ ತಂಡವು ಅಕ್ಟೋಬರ್‌ ತಿಂಗಳ 4 ರಿಂದ 9ರ ನಡುವೆ ಭೇಟಿ ನೀಡಿ, ವರದಿಯನ್ನು ಸಲ್ಲಿಸಿದೆ. ಅದರ ನಂತರ ಇನ್ನೂ 21 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಯಿತು.

ಆದ್ದರಿಂದ ಅಕ್ಟೋಬರ್‌ 20 ರಂದು ಕೇಂದ್ರ ಕೃಷಿ ಸಚಿವಾಲಯಕ್ಕೆ ಎನ್‌.ಡಿ.ಆರ್.ಎಫ್. ಅಡಿ 17,901 ಕೋಟಿ ರೂ. ಪರಿಹಾರ ಒದಗಿಸುವಂತೆ ಪ್ರಸ್ತಾವನೆ ಸಲ್ಲಿಸಲಾಯಿತು. ಇದರಲ್ಲಿ ತುರ್ತು ಪರಿಹಾರದ12,577 ಕೋಟಿ ರೂ. ಮೊತ್ತವೂ ಸೇರಿದೆ. ನವೆಂಬರ್‌ 4 ರಂದು ಹೆಚ್ಚುವರಿಯಾಗಿ 7 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಯಿತು. ಈ ಹಿನ್ನೆಲೆಯಲ್ಲಿ ಸಲ್ಲಿಸಿದ ಪೂರಕ ಮನವಿಯೊಂದಿಗೆ ಕೇಂದ್ರದಿಂದ 18,177 ಕೋಟಿ ರೂ. ಪರಿಹಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಮೊದಲ ಮನವಿ ಸಲ್ಲಿಸಿ ಈಗಾಗಲೇ ಮೂರು ತಿಂಗಳು ಕಳೆದಿದ್ದು, ರೈತರು ಅತ್ಯಂತ ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಬೆಳೆ ವಿಫಲವಾಗಿರುವ ಹಿನ್ನೆಲೆಯಲ್ಲಿ ರೈತರಿಗೆ ಇನ್‌ಪುಟ್‌ ಸಬ್ಸಿಡಿ ನೀಡುವುದು ಅತ್ಯಗತ್ಯವಾಗಿದೆ ಎಂದು ಪ್ರಧಾನ ಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಬರದಿಂದ ಸಂಕಷ್ಟದಲ್ಲಿರು ಕರ್ನಾಟಕದ ರೈತರ ಹಿತರಕ್ಷಣೆಯ ದೃಷ್ಟಿಯಿಂದ ಆದಷ್ಟು ಬೇಗ ಪರಿಹಾರ ಬಿಡುಗಡೆ ಮಾಡುವಂತೆ ಕೋರಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಬರ ಪರಿಸ್ಥಿತಿಯಲ್ಲಿ ನರೇಗಾ ಕೆಲಸವನ್ನು 100 ರಿಂದ 150 ದಿನಗಳಿಗೆ ಕಡ್ಡಾಯವಾಗಿ ಹೆಚ್ಚಿಸಲು ಕಾನೂನಿನಲ್ಲಿ ಅವಕಾಶವಿದೆ. ಅದರಂತೆ ಹೆಚ್ಚಿಸಲು 3 ತಿಂಗಳ ಹಿಂದೆಯೇ ನಾವು ಕೇಂದ್ರಕ್ಕೆ ಮನವಿಯನ್ನು  ಮಾಡಿದ್ದೇವೆ. ಈ ವರೆಗೆ ಮನವಿ ಈಡೇರಿಲ್ಲ. ಈ ಬಗ್ಗೆಯೂ ತುರ್ತಾಗಿ ತೀರ್ಮಾನ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದೇವೆ.

ಮಹದಾಯಿ ವಿಚಾರದಲ್ಲಿ ಈಗಾಗಲೇ ಗೆಜೆಟ್ ಕೂಡ ಆಗಿದೆ. ಬೇರೆ ಅಡೆ ತಡೆ ಏನೂ ಇಲ್ಲ. ಪರಿಸರ ತೀರುವಳಿ ಮಾತ್ರ ಬಾಕಿ ಇದೆ. ಇದನ್ನು ಕೇಂದ್ರವೇ ಕೊಡಬೇಕು. ಇದುವರೆಗೂ ಕೊಟ್ಟಿಲ್ಲ. ಟೆಂಡರ್ ಕರೆದು ಎಸ್ಟಿಮೇಟ್ ಕೂಡ ಆಗಿದೆ. ಕೇಂದ್ರ ಕ್ಲಿಯರೆನ್ಸ್ ಕೊಟ್ಟ ಕೂಡಲೇ ಕೆಲಸ ಶುರು ಮಾಡಬಹುದು. ಆದ್ದರಿಂದ ಬೇಗ ಕ್ಲಿಯರೆನ್ ಕೊಡಿಸುವಂತೆ ಒತ್ತಾಯಿಸಿದ್ದೇವೆ.

ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ನಲ್ಲಿ ರೂ.5,300 ಕೋಟಿ ಘೋಷಿಸಿದ್ದರು‌. ಕೇಂದ್ರ ಸರ್ಕಾರದ ಘೋಷಣೆ ಆಧಾರದಲ್ಲಿ ಹಿಂದಿನ‌ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಕೂಡ ರೂ.5,300 ಕೋಟಿ ಘೋಷಿಸಿದ್ದರು. ಇವತ್ತಿನವರೆಗೂ ಒಂದು ರೂಪಾಯಿ ಕೂಡ ಬಂದಿಲ್ಲ. ಇದು ಕೇಂದ್ರ ಮತ್ತು ಹಿಂದಿನ ಬಿಜೆಪಿ ಸರ್ಕಾರದ ಕಮಿಟ್‌ಮೆಂಟ್. ನೀವೇ ಕೊಟ್ಟಿರುವ ಮಾತಿನಂತೆ ಹಣ ಬಿಡುಗಡೆ ಮಾಡಿ ಎಂದು ಒತ್ತಾಯಿಸಿದ್ದೇವೆ.

ಮೇಕೆದಾಟು, ಕುಡಿಯುವ ನೀರಿನ ಯೋಜನೆ. ರಾಜ್ಯದ ಗಡಿಯ ಒಳಗೆ ನಿರ್ಮಾಣ ಆಗುವ ಯೋಜನೆ. ತಮಿಳುನಾಡು ಸರ್ಕಾರ ರಾಜಕೀಯ ಕಾರಣಕ್ಕೆ ತಕರಾರು ಮಾಡುತ್ತಿದೆ. ಇದರಿಂದ ತಮಿಳುನಾಡಿಗೇ ಹೆಚ್ಚು ಅನುಕೂಲ. ನಮಗೆ ಕುಡಿಯುವ ನೀರಿನ ಜೊತೆಗೆ 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಆಗುತ್ತದೆ. ವಿದ್ಯುತ್ ಉತ್ಪಾದನೆ ಬಳಿಕ ಈ ನೀರು ಕೂಡ ತಮಿಳುನಾಡಿಗೇ ಹೋಗುತ್ತದೆ. ಇದರಿಂದಲೂ ಅವರಿಗೇ ಅನುಕೂಲ.

ಮೇಕೆದಾಟು ಆದರೆ ಬೆಂಗಳೂರು ಮತ್ತು ರಾಮನಗರ ಜಿಲ್ಲೆಗೆ ಕುಡಿಯುವ ನೀರಿಗೆ ಅನುಕೂಲ ಆಗುತ್ತದೆ. ಆದ್ದರಿಂದ ಮೇಕೆದಾಟುಗೆ ಬೇಗ ಅನುಮತಿ ಕೊಡಿಸುವಂತೆ ಪ್ರಧಾನಿಗಳ ಗಮನಕ್ಕೆ ತಂದು, ಒತ್ತಾಯಿಸಿದ್ದೇವೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT