ರಾಜ್ಯ

ಶಾರ್ಟ್ ಸರ್ಕ್ಯೂಟ್‌ನಿಂದ ಹೇರ್ ಡ್ರೈಯರ್‌ಗೆ ಬೆಂಕಿ, ಪೀಠೋಪಕರಣಗಳು ಭಸ್ಮ; ಟೆಕ್ಕಿ ವಿರುದ್ಧ ಪಿಜಿ ಮಾಲೀಕರ ದೂರು!

Ramyashree GN

ಬೆಂಗಳೂರು: ಹೈರ್ ಡೈಯರ್‌ಗೆ ತಗುಲಿದ ಬೆಂಕಿಯಿಂದ ಪೀಠೋಪಕರಣಗಳು ಸುಟ್ಟು ಭಸ್ಮವಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಸಾಫ್ಟ್‌ವೇರ್ ವೃತ್ತಿಪರರೊಬ್ಬರ ವಿರುದ್ಧ ಪಿಜಿ ಮಾಲೀಕರು ಪೊಲೀಸರಿಗೆ ದೂರು ದಾಖಲಿಸಿದ್ದಾರೆ.
ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಪೊಲೀಸರ ಪ್ರಕಾರ, ಸಾಫ್ಟ್‌ವೇರ್ ವೃತ್ತಿಪರರಾದ ಶಾಂಭವಿ ಅವರು ಕಚೇರಿಗೆ ಹೊರಡುವ ದಾವಂತದಲ್ಲಿ ಹೇರ್ ಡ್ರೈಯರ್‌ನಿಂದ ಕೂದಲನ್ನು ಒಣಗಿಸುತ್ತಿದ್ದರು. ಈ ವೇಳೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಹೇರ್ ಡ್ರೈಯರ್‌ಗೆ ಬೆಂಕಿ ತಗುಲಿದೆ.

ಟೆಕ್ಕಿ ತಕ್ಷಣವೇ ಉರಿಯುತ್ತಿದ್ದ ಹೇರ್ ಡ್ರೈಯರ್ ಅನ್ನು ಹಾಸಿಗೆಯ ಮೇಲೆ ಎಸೆದಿದ್ದಾರೆ. ಘಟನೆಯಲ್ಲಿ ಹಾಸಿಗೆ ಮತ್ತಿತರ ಪೀಠೋಪಕರಣಗಳು ಸುಟ್ಟು ಕರಕಲಾಗಿವೆ.

ಘಟನೆಗೆ ಟೆಕ್ಕಿಯ ನಿರ್ಲಕ್ಷ್ಯವೇ ಕಾರಣ ಎಂದು ಪಿಜಿ ಮಾಲೀಕರು ಆರೋಪಿಸಿದ್ದು, ಆಕೆಯ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.

SCROLL FOR NEXT