ಬೆಂಗಳೂರು: ಕೋಲಾರದಲ್ಲಿ ವಿದ್ಯಾರ್ಥಿಗಳಿಂದ ಮಲ ಗುಂಡಿ ಸ್ವಚ್ಛ ಮಾಡಿಸಿದ್ದು ಇನ್ನೂ ಮಾಸದೆ ಇರುವ ಸಂದರ್ಭದಲ್ಲೇ ಬೆಂಗಳೂರಿನ ಆಂಧ್ರ ಹಳ್ಳಿಯಲ್ಲಿ ಇಂತಹುದೇ ಘಟನೆ ವರದಿಯಾಗಿದೆ.
ಯಶವಂತಪುರ ಕ್ಷೇತ್ರದ ಅಂಧ್ರಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಮಕ್ಕಳ ಕೈಯಿಂದಲೇ ಶಿಕ್ಷಕರು ಶೌಚಾಲಯ ಕ್ಲೀನ್ ಮಾಡಿಸಿದ್ದಾರೆ. ಇದರ ವಿರುದ್ಧ ರಾಜಕೀಯ ನಾಯಕರು ಹಾಗೂ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ವರದಿ ಹಂಚಿಕೊಂಡಿರುವ ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಮುಗ್ಧ ಮಕ್ಕಳಿಂದ ಶೌಚಾಲಯ ಸ್ವಚ್ಛ ಮಾಡಿಸಿರುವುದು ನಿಜಕ್ಕೂ ಖಂಡನೀಯ. ಹಣವನ್ನು ಉಳಿತಾಯ ಮಾಡುವುದಕ್ಕೆ ವಿದ್ಯಾರ್ಥಿಗಳನ್ನೇ ಸಂಪನ್ಮೂಲಗಳನ್ನಾಗಿ ಬಳಸುವುದು ತರವಲ್ಲ ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ: ಕೋಲಾರ: ಮಲದ ಗುಂಡಿಯೊಳಗೆ ಮಕ್ಕಳನ್ನು ಇಳಿಸಿ ಸ್ವಚ್ಛತಾ ಕಾರ್ಯ: ಪ್ರಾಂಶುಪಾಲ, ವಾರ್ಡನ್, ಶಿಕ್ಷಕ ಅಮಾನತು
ಸ್ವಚ್ಛ ಮಾಡುವ ಕೆಲಸದಿಂದ ಹಿಡಿದು ಬಿಸಿಯೂಟದವರೆಗೂ ಸ್ಪಷ್ಟವಾದ ಪ್ರಮಾಣಿತ ಕಾರ್ಯಾಚರಣಾ ವಿಧಾನ ಇರಬೇಕು. ಹಾಗೂ ಇದನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕಾದದ್ದು ಶಾಲೆ ಹಾಗೂ ಶಿಕ್ಷಣ ಇಲಾಖೆಯ ಜವಾಬ್ದಾರಿ ಎಂದಿದ್ದಾರೆ.