
ಶಿಕ್ಷಣ, ಪೊಲೀಸ್ ಮತ್ತು ಆರೋಗ್ಯ ಸೇರಿದಂತೆ ವಿವಿಧ ಇಲಾಖೆಗಳಲ್ಲಿನ 2.7 ಲಕ್ಷ ಖಾಲಿ ಹುದ್ದೆಗಳನ್ನು ರಾಜ್ಯ ಸರ್ಕಾರ ಭರ್ತಿ ಮಾಡಬೇಕೆಂದು ಆಗ್ರಹಿಸಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘ ಮತ್ತು ಬಿಜೆಪಿ ಕಾರ್ಯಕರ್ತರ ನೇತೃತ್ವದಲ್ಲಿ ಸಾವಿರಾರು ಮಂದಿ ಧಾರವಾಡದಲ್ಲಿ ಪ್ರತಿಭಟನೆ ನಡೆಸಿದರು. ಖಾಲಿ ಇರುವ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡುವಂತೆ ಘೋಷಣೆ ಕೂಗಿರುವ ಪ್ರತಿಭಟನಾಕಾರರು, ಕಾಂಗ್ರೆಸ್ ನಾಯಕರ ಫೋಟೋಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಧಾರವಾಡ ಪೊಲೀಸರ ಹರಸಾಹಸ ಪಡಬೇಕಾಯಿತು. ಜಯನಗರ ವೃತ್ತದ ಕಡೆಗೆ ಹೋಗುತ್ತಿದ್ದ ಪ್ರತಿಭಟನಾಕಾರರನ್ನು ಶ್ರೀನಗರ ವೃತ್ತದ ಬಳಿಯೇ ಪೊಲೀಸರು ತಡೆದರು. ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಸೇರಿದಂತೆ ಹಲವು ಬಿಜೆಪಿ ನಾಯಕರು ಪ್ರತಿಭಟನೆಗೆ ಬೆಂಬಲ ನೀಡಿದ್ದಾರೆ.ಪ್ರತಿಭಟನೆ ವಿಷಯವಾಗಿ ಪ್ರತಿಕ್ರಿಯೆ ನೀಡಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ನಾವು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಉದ್ಯೋಗ ಸಿಗದಿದ್ದಕ್ಕೆ ನಾವು ಗ್ಯಾರಂಟಿ ಅಡಿಯಲ್ಲಿ ವಿದ್ಯಾರ್ಥಿಗಳಿಗೆ 3 ಸಾವಿರ ರೂಪಾಯಿ ನೀಡುತ್ತಿದ್ದೇವೆ ಎಂದು ಹೇಳಿದರು. ಇನ್ನು ಪ್ರತಿಭಟನೆ ಬೆನ್ನಲ್ಲೇ ವಯೋಮಿತಿ 5 ವರ್ಷ ಸಡಿಲಿಕೆಯನ್ನು ಸಿಎಂ ಘೋಷಿಸಿದ್ದಾರೆ.
ಶಿವಮೊಗ್ಗದ ಸುಲೇಬೈಲು ಸರ್ಕಾರಿ ಶಾಲೆಯ ಹೊರಗೆ 16 ವರ್ಷದ ಬಾಲಕನ ಕೊಲೆಯಾಗಿದ್ದು, ಪ್ರದೇಶದಲ್ಲಿ ಉದ್ವಿಗ್ನತೆ ಉಂಟಾಗಿದೆ. ಉರಗದೂರಿನ ಸರ್ಕಾರಿ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಸಂಕೇತ್ (16) ಪರೀಕ್ಷೆಗೆ ಮುನ್ನ ವಿಶೇಷ ತರಗತಿಗೆ ಹಾಜರಾದ ನಂತರ ಈ ಘಟನೆ ಸಂಭವಿಸಿದೆ. ಸಂಕೇತ್ ತನ್ನ ಶಾಲೆಯ ಹೊರಗೆ ಹುಡುಗರ ಗುಂಪಿನ ನಡುವೆ ನಡೆದ ವಾಗ್ವಾದದಲ್ಲಿ ಮಧ್ಯಪ್ರವೇಶಿಸಿದ್ದರು. ಈ ವೇಳೆ ವಾಗ್ವಾದ ನಡೆದು ಹತ್ಯೆ ಮಾಡಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ ತಿಳಿಸಿದ್ದಾರೆ. ಕ್ರಿಕೆಟ್ ಮ್ಯಾಚ್ ವಾಗ್ವಾದದಿಂದ ಕೊಲೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಜನರನ್ನು ವಶಕ್ಕೆ ಪಡೆದಿದ್ದೇವೆ. ಇದಕ್ಕೆ ಒಂದು ವಿಶೇಷ ತನಿಖಾ ತಂಡ ರಚಿಸಿದ್ದೇವೆ. ಎರಡು ದಿನದ ಹಿಂದೆ ಕ್ರಿಕೆಟ್ ಮ್ಯಾಚ್ ನಡೆದಿತ್ತು. ಗಾಂಜಾ ಹಾವಳಿ ಬಗ್ಗೆಯೂ ತನಿಖೆ ಮಾಡುತ್ತೇವೆ . ಆರೋಪಿಗಳನ್ನು ಗಾಂಜಾ ಟೆಸ್ಟ್ ಗೆ ಒಳಪಡಿಸುತ್ತೇವೆ ಎಂದು ಎಸ್ಪಿ ನಿಖಿಲ್ ಹೇಳಿದ್ದಾರೆ. ಸಂಕೇತ್ ಹತ್ಯೆಯ ಹಿನ್ನಲೆಯಲ್ಲಿ ಶಿವಮೊಗ್ಗದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.ಗಾಂಜಾ ಹಾವಳಿಯೇ ಘಟನೆಗೆ ಕಾರಣ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಇನ್ನು ಮೃತ ಬಾಲಕನ ಕುಟುಂಬಕ್ಕೆ ರಾಜ್ಯ ಸರ್ಕಾರ ಒಟ್ಟಾರೆ 15 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ.
ನಟ ರಿಷಬ್ ಶೆಟ್ಟಿ ಅಭಿನಯ ಕಾಂತಾರಾ ಚಿತ್ರದ ಕುರಿತು ತುಂಬಿದ ವೇದಿಕೆಯಲ್ಲೇ ಅಪಹಾಸ್ಯ ಮಾಡಿದ್ದ ಬಾಲಿವುಡ್ ನಟ ರಣವೀರ್ ಸಿಂಗ್ ಗೆ ಹೈಕೋರ್ಟ್ ಚಾಟಿ ಬೀಸಿದೆ. ಗೋವಾದಲ್ಲಿ ಸಿನಿಮಾ ಫೆಸ್ಟಿವಲ್ ವೇಳೆ ನಟ ರಿಷಬ್ ಶೆಟ್ಟಿ ಅವರನ್ನು ಹೊಗಳುವ ಭರದಲ್ಲಿ ದೈವವನ್ನು ಫೀಮೇಲ್ ಗೋಸ್ಟ್ ಎಂದು ಹೇಳಿಕೆ ನೀಡಿದ್ದ ರಣವೀರ್ ಸಿಂಗ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಇಂದು ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್ ನ ನಾಗಪ್ರಸನ್ನ ಪೀಠ, ಒಂದು ಭಾಗದ ಜನರ ಮತ್ತು ಧಾರ್ಮಿಕ ಭಾವನೆಗೆ ದಕ್ಕೆ ತರುವ ಹಾಗೆ ಮಾತಬಾಡಬಾರದು. ಅದು ರಣವೀರ್ ಸಿಂಗ್ ಅಗಿರಲಿ, ಯಾರೇ ಅಗಿದ್ದು ಸರಿ ಹಾಗೆ ಮಾತನಾಡುವುದು ಸಲ್ಲದು. ಹೀಗಾಗಿ ಇದನ್ನ ಹಗುರವಾಗಿ ಪರಿಗಣಿಸಲಾಗುವುದಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಮುಂದಿನ ಆದೇಶದವರೆಗೆ ಯಾವುದೇ ಬಲವಂತದ ಕ್ರಮ ಜರುಗಿಸಿದಂತೆ ಆದೇಶ ನೀಡಿದ್ದು, ಮಾ.2 ಕ್ಕೆ ಅರ್ಜಿ ವಿಚಾರಣೆ ಮುಂದೂಡಿದೆ.
16 ವರ್ಷದೊಳಗಿನ ಮಕ್ಕಳಿಗೆ ಮೊಬೈಲ್ ಫೋನ್ ಬಳಕೆಯನ್ನು ನಿಷೇಧಿಸುವ ವಿಚಾರ ಇನ್ನೂ ಚರ್ಚೆಯ ಹಂತದಲ್ಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ಪೋಷಕರಿಂದಲೂ ಒತ್ತಡವಿದ್ದು, ಅನೇಕ ದೇಶಗಳಲ್ಲಿ ಈ ಕ್ರಮವನ್ನು ಕೈಗೊಂಡಿದೆ. ಇಲ್ಲೂ ಈ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಹೇಳಿದರು. ನಮ್ಮ ಶಾಲೆಗಳಲ್ಲಿ ಮೊಬೈಲ್ ನಿಷೇಧ ಮಾಡಿದ್ದೇವೆ. ಮೊಬೈಲ್‌ಗಳ ದುರುಪಯೋಗ ಹೇಗೆ ನಡೆಯುತ್ತಿದೆ ಎಂಬುದನ್ನು ವಿವರಿಸಲು ಸಾಧ್ಯವಿಲ್ಲ. ಅದಕ್ಕಾಗಿಯೇ ಈ ಕುರಿತು ಚರ್ಚೆಗಳು ನಡೆಯುತ್ತಿವೆ. ಹಲವಾರು ದೇಶಗಳು ಮಕ್ಕಳಿಗೆ ಮೊಬೈಲ್ ನಿಷೇಧ ಮಾಡಿವೆ. ಈ ವಿಷಯ ಜಾಗತಿಕ ಮಟ್ಟದಲ್ಲಿಯೂ ಚರ್ಚೆಯಲ್ಲಿದೆ ಎಂದು ತಿಳಿಸಿದರು.
Advertisement