ರಾಜ್ಯ

68 ಬಿಬಿಎಂಪಿ ಶಾಲೆಗಳು ಶಿಕ್ಷಣ ಇಲಾಖೆ ಸುಪರ್ದಿಗೆ!

Manjula VN

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ 68 ಶಾಲೆಗಳನ್ನು ಶಿಕ್ಷಣ ಇಲಾಖೆ ಸುಪರ್ದಿಗೆ ನೀಡಲು ತೀರ್ಮಾನಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶುಕ್ರವಾರ ಹೇಳಿದರು.

ನೃಪತುಂಗ ರಸ್ತೆಯಲ್ಲಿರುವ ಸಮಗ್ರ ಶಿಕ್ಷಣ ಇಲಾಖೆ ಕಚೇರಿಯಲ್ಲಿ ಇಂದು ನಡೆದ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರತಿ ವರ್ಷ ಫಲಿತಾಂಶದಲ್ಲಿ ಬಿಬಿಎಂಪಿ ಶಾಲೆಗಳಲ್ಲಿ ಕುಸಿತ ಕಂಡಿರುವುದನ್ನು ನಾವು ಗಮನಿಸಿದ್ದೇವೆ. ಇದಕ್ಕೆ ಅವಕಾಶ ನೀಡಬಾರದು. ಹೀಗಾಗಿ ಖಾಸಗಿ ಶಾಲೆಗಳಿಗೆ ಸರಿಸಮನಾಗಿ ಗುಣಮಟ್ಟದ ಶಿಕ್ಷಣ ನೀಡಲು ಈ ತೀರ್ಮಾನ ಮಾಡಲಾಗಿದೆ ಎಂದು ಹೇಳಿದರು.

ಶಾಲೆಗಳಲ್ಲಿ ಶಿಕ್ಷಣ ನೀಡುವಂತಹ ಜವಾಬ್ದಾರಿಯನ್ನು ಮಾತ್ರ ಶಿಕ್ಷಣ ಇಲಾಖೆಗೆ ನೀಡಲಾಗುತ್ತಿದ್ದು, ಈ ಶಾಲೆಗಳ ಮೂಲಸೌಕರ್ಯಗಳ ಉನ್ನತೀಕರಣ ಹಾಗೂ ನಿರ್ವಹಣೆಯನ್ನು ಬಿಬಿಎಂಪಿಯಿಂದಲೇ ಮಾಡಲಾಗುವುದು. ಶಾಲೆಯ ಜಾಗ, ಕಟ್ಟಡ ನಿರ್ವಹಣೆ ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯವನ್ನು ಪಾಲಿಕೆಯಿಂದಲೇ ನಿರ್ವಹಿಸಲಾಗುವುದು. ಗುಣಮಟ್ಟದ ಶಿಕ್ಷಣ ನೀಡುವ ಜವಾಬ್ದಾರಿಯನ್ನು ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದರು.

ಸಿಎಸ್ಆರ್ ನಿಧಿಯ ಮೂಲಕ ಪಂಚಾಯಿತಿ ಮಟ್ಟದಲ್ಲಿ 2 ಸಾವಿರ ಕರ್ನಾಟಕ ಪಬ್ಲಿಕ್ ಶಾಲೆಗಳ ನಿರ್ಮಾಣ ಮಾಡುವ ಗುರಿ ಸರ್ಕಾರದ ಮುಂದಿದ್ದು, ಮೊದಲ ವರ್ಷ 500 ಶಾಲೆಗಳ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿದೆ. ಮುಂದಿನ ತಿಂಗಳು ಮೊದಲನೇ ಅಥವಾ ಎರಡನೇ ವಾರದಲ್ಲಿ ಎಲ್ಲಾ ಸಿಎಸ್ಆರ್ ಕಂಪನಿಗಳನ್ನು ಕರೆದು ಅವರಿಗೆ ಈ ಶಾಲೆಗಳ ನಿರ್ಮಾಣ ಯೋಜನೆಗಳನ್ನು ನೀಡುತ್ತೇವೆ. ಅವರು ನಮಗೆ ಗುಣಮಟ್ಟದ ಮೂಲಸೌಕರ್ಯವಿರುವ ಶಾಲೆಗಳನ್ನು ನಿರ್ಮಿಸಿ ಕೊಡಲಿದ್ದಾರೆ. ಪ್ರತಿ ಶಾಲೆಯ ಮೂಲಭೂತ ಸೌಕರ್ಯಕ್ಕೆ ಕನಿಷ್ಠ 4 ಕೋಟಿಯಿಂದ 7 ಕೋಟಿ ರೂ.ವರೆಗೂ ವೆಚ್ಚವಾಗಲಿದೆ. ನಾವು ಈಗಾಗಲೇ ಕೆಲವು ಕಂಪನಿಗಳ ಜತೆ ಚರ್ಚೆ ಮಾಡಿದ್ದು, ಮತ್ತೊಂದು ಸುತ್ತಿನ ಸಭೆ ಮಾಡುತ್ತೇವೆ ಎಂದರು.

ಕಂಪನಿ ಅಥವಾ ಸಂಸ್ಥೆಗಳು ಸರ್ಕಾರಕ್ಕೆ ಸಿಎಸ್ಆರ್ ಹಣ ನೀಡುವ ಅಗತ್ಯವಿಲ್ಲ. ಶಾಲೆ ನಿರ್ಮಾಣಕ್ಕೆ ಬೇಕಾದ ಭೂಮಿಯನ್ನು ಕನಿಷ್ಠ 2 ಎಕರೆಯಿಂದ ಮೂರ್ನಾಲ್ಕು ಎಕರೆಯಷ್ಟು ಜಾಗವನ್ನು ಸರ್ಕಾರ ನೀಡಲಿದ್ದು, ಅಲ್ಲಿ ಈ ಸಂಸ್ಥೆಗಳು ಶಾಲೆ ನಿರ್ಮಿಸಲಿವೆ. ಶಾಲೆಯಲ್ಲಿ ಲೈಬ್ರರಿ, ತರಗತಿ, ಪ್ರಯೋಗಾಲಯ, ಶೌಚಾಲಯ ಸೇರಿದಂತೆ ಎಲ್ಲದರ ಯೋಜನೆ ನೀಡಲಾಗುವುದು. ಅವರು ಬೇಕೆಂದರೆ ಇನ್ನು ಉತ್ತಮ ಯೋಜನೆ ಮಾಡಿಕೊಂಡು ಶಾಲೆ ನಿರ್ಮಾಣ ಮಾಡಬಹುದು. ಈ ಬಗ್ಗೆ ರಾಮನಗರ ಜಿಲ್ಲೆಯಲ್ಲಿ ಪ್ರಯೋಗ ಆರಂಭವಾಗಿದೆ ಎಂದು ಹೇಳಿದರು.

SCROLL FOR NEXT