ರಾಜ್ಯ

ಶಿಕ್ಷಣ ಸಚಿವರ ತವರು ಜಿಲ್ಲೆಯಲ್ಲೇ ಮತ್ತೊಂದು ಘಟನೆ: ಶಾಲಾ ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸಿದ ವಿಡಿಯೋ ವೈರಲ್

Ramyashree GN

ಶಿವಮೊಗ್ಗ: ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪದೇ ಪದೆ ಎಚ್ಚರಿಕೆ ನೀಡುತ್ತಿದ್ದರೂ, ಅದನ್ನು ಲೆಕ್ಕಿಸದೆ ವಿದ್ಯಾರ್ಥಿಗಳಿಂದ ಶಾಲೆಯ ಶೌಚಾಲಯವನ್ನು ಸ್ವಚ್ಛ ಮಾಡಿಸಿರುವ ಮತ್ತೊಂದು ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ತವರು ಜಿಲ್ಲೆಯಲ್ಲಿಯೇ ಈ ಘಟನೆ ವರದಿಯಾಗಿದ್ದು, ಈ ಘಟನೆ ಕಾಂಗ್ರೆಸ್ ಸರ್ಕಾರಕ್ಕೆ ಭಾರಿ ಮುಖಭಂಗವಾಗಿದೆ.

ಕೊಮಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡ್ಡದ ನೇರಲಕೆರೆ ಗ್ರಾಮದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಶೌಚಾಲಯ ಸ್ವಚ್ಛತೆಯಲ್ಲಿ ತೊಡಗಿದ್ದರು ಎನ್ನಲಾಗಿದೆ. ವಿದ್ಯಾರ್ಥಿಗಳು ಶಾಲೆಯ ಶೌಚಾಲಯವನ್ನು ಸ್ವಚ್ಛಗೊಳಿಸುತ್ತಿರುವ ವಿಡಿಯೋ ಗುರುವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಕುರಿತು ದಲಿತ ಸಂಘರ್ಷ ಸಮಿತಿಯು ಸಹಾಯಕ ಆಯುಕ್ತ ಸತ್ಯನಾರಾಯಣ ಅವರಿಗೆ ದೂರು ಸಲ್ಲಿಸಿದೆ. ಮುಖ್ಯಶಿಕ್ಷಕ ಶಂಕರಪ್ಪ ಹಾಗೂ ಇತರೆ ಶಿಕ್ಷಕರು ಶಾಲಾ ಮಕ್ಕಳನ್ನು ಶೌಚಾಲಯ ಸ್ವಚ್ಛಗೊಳಿಸಲು ತೊಡಗಿಸಿಕೊಂಡಿದ್ದರು ಎನ್ನಲಾಗಿದೆ.

ಆರೋಪಿ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೋಷಕರು ಹಾಗೂ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

ಡಿಸೆಂಬರ್ 23 ರಂದು, ಬೆಂಗಳೂರಿನ ಶಾಲೆಯೊಂದರಲ್ಲಿ ಮಕ್ಕಳಿಂದ ಶೌಚಾಲಯವನ್ನು ಸ್ವಚ್ಛಗೊಳಿಸಿದ ಆರೋಪ ಕೇಳಿಬಂದಿತ್ತು. 
ಈ ಸಂಬಂಧ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಆಂಜಿನಪ್ಪ ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿಯನ್ನು ಪೊಲೀಸರು ಬಂಧಿಸಿದ್ದರು.

ಕೋಲಾರ ಜಿಲ್ಲೆಯ ಶಾಲೆಯ ಆವರಣದಲ್ಲಿನ ಸೆಪ್ಟಿಕ್ ಟ್ಯಾಂಕ್ ಅನ್ನು ಶಾಲಾ ಮಕ್ಕಳಿಂದ ಸ್ವಚ್ಛಗೊಳಿಸಿದ್ದ ಘಟನೆಯೂ ಇತ್ತೀಚೆಗೆ ವರದಿಯಾಗಿದೆ.

SCROLL FOR NEXT