ರಾಜ್ಯ

ಕೊಡಗು: ಕೇರಳದಿಂದ ತ್ಯಾಜ್ಯ ತಂದು ಮಾಕುಟ್ಟ ಮೀಸಲು ಅರಣ್ಯದಲ್ಲಿ ಸುರಿಯಲು ಯತ್ನಿಸಿದ ಇಬ್ಬರ ಬಂಧನ

Lingaraj Badiger

ಮಡಿಕೇರಿ: ಕೇರಳದಿಂದ 15 ಚೀಲ ಪ್ಲಾಸ್ಟಿಕ್ ತ್ಯಾಜ್ಯ ತಂದು ಮಾಕುಟ್ಟ ಮೀಸಲು ಅರಣ್ಯದಲ್ಲಿ ಸುರಿಯಲು ಯತ್ನಿಸಿದ ಇಬ್ಬರು ಆರೋಪಿಗಳನ್ನು ಮಾಕುಟ್ಟ ವನ್ಯಜೀವಿ ವಲಯ ಅಧಿಕಾರಿಗಳು ಸೋಮವಾರ ಸಂಜೆ ಬಂಧಿಸಿದ್ದಾರೆ. 

ಮಾಕುಟ್ಟ ಅರಣ್ಯವು ಕೊಡಗು ಜಿಲ್ಲೆ ಮತ್ತು ಕೇರಳದ ಗಡಿಯಲ್ಲಿದ್ದು, ಕೇರಳದಿಂದ ಟ್ರಕ್‌ಗಳಲ್ಲಿ ತ್ಯಾಜ್ಯ ತಂದು ಸುರಿಯುತ್ತಿದ್ದು, ಅರಣ್ಯ ಪ್ರದೇಶ ಡಂಪ್ ಯಾರ್ಡ್‌ ಆಗಿ ಬದಲಾಗುತ್ತಿದೆ. ಎಚ್ಚೆತ್ತ ನಿವಾಸಿಗಳು, ಕೊಡಗು ಸೇವಾ ಕೇಂದ್ರದ ಪ್ರತಿನಿಧಿಗಳು ಸೇರಿದಂತೆ ಕೆಲವು ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಈ ಬಗ್ಗೆ ದೂರು ನೀಡಿದ್ದರು.

ಈ ದೂರುಗಳ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮಕೈಗೊಂಡಿದ್ದಾರೆ. ಮಾಕುಟ್ಟಾ ಅರಣ್ಯ ಚೆಕ್‌ಪೋಸ್ಟ್‌ನಲ್ಲಿ ನಿತ್ಯ ತಪಾಸಣೆ ನಡೆಸುತ್ತಿದ್ದಾರೆ. ಅದೇ ರೀತಿ ಸೋಮವಾರ ಸಂಜೆ ಮಾಕುಟ್ಟ ಚೆಕ್ ಪೋಸ್ಟ್ ಬಳಿ 15 ಮೂಟೆ ತ್ಯಾಜ್ಯದೊಂದಿಗೆ ಲಾರಿಯೊಂದನ್ನು ವಶಪಡಿಸಿಕೊಳ್ಳಲಾಗಿದೆ.

ಟ್ರಕ್ ಚಾಲಕ ಮತ್ತು ಕ್ಲೀನರ್ ಮೀಸಲು ಅರಣ್ಯ ಪ್ರದೇಶದ ಮಾಕುಟ್ಟದಲ್ಲಿ ತ್ಯಾಜ್ಯವನ್ನು ಸುರಿಯಲು ಯೋಜಿಸಿದ್ದರು. ಬಂಧಿತ ಆರೋಪಿಗಳನ್ನು ಆಂಧ್ರಪ್ರದೇಶದ ನೆಲ್ಲೂರು ಮೂಲದ ಪೆಂಚಲಯ್ಯ ಮತ್ತು ಶೀನಾ ಎಂದು ಗುರುತಿಸಲಾಗಿದೆ.

ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

SCROLL FOR NEXT