ರಾಜ್ಯ

ಕೇಂದ್ರ ಬಜೆಟ್ 2023: ವಿರೋಧಿಸುವ ಏಕೈಕ ಉದ್ದೇಶ ಬಿಟ್ಟು ಕರ್ನಾಟಕದ ಸಂಸ್ಕೃತಿಗೆ ತಕ್ಕಂತೆ ಸಿದ್ದರಾಮಯ್ಯ ಮಾತನಾಡಲಿ: ಪ್ರಹ್ಲಾದ್ ಜೋಶಿ

Manjula VN

ನವದೆಹಲಿ: ಎಲ್ಲವನ್ನೂ ವಿರೋಧಿಸಬೇಕೆಂಬುದನ್ನು ವಿರೋಧ ಪಕ್ಷಗಳು ಪಾಲಿಸಿ ಮಾಡಿಕೊಂಡು ಬಿಟ್ಟಿವೆ. ಆದರೆ, ಕೇಂದ್ರ ಬಜೆಟ್ ವಿರೋಧಿಸುವ ಭರದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿಯವರು ಹೇಳಿದ್ದಾರೆ.

ಕೇಂದ್ರ ಬಜೆಟ್ ಮಂಡನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿರೋಧಿಸುವ ಏಕೈಕ ಉದ್ದೇಶ ಬಿಟ್ಟು, ಸಿದ್ದರಾಮಯ್ಯ ಅವರು ಕರ್ನಾಟಕದ ಸಂಸ್ಕೃತಿಯನ್ನು ಅರಿತು ಮಾತನಾಡಬೇಕು ಎಂದು ಹೇಳಿದ್ದಾರೆ.

ಮೊನ್ನೆಯಷ್ಟೇ ರಾಜ್ಯದ ಮುಖ್ಯಮಂತ್ರಿಗಳಿಗೆ ಸಿದ್ದರಾಮಯ್ಯ ಅವರು ನಾಯಿ ಎಂಬ ಪದ ಬಳಸಿದ್ದರು. ಇದು ಕರ್ನಾಟಕ ನಾಯಕರ ಸಂಸ್ಕೃತಿಗೆ ತಕ್ಕದ್ದಲ್ಲ. ವಿಪಕ್ಷ ನಾಯಕರಾಗಿ ಹೇಗೆ ಬೇಕೋ ಹಾಗೆ ನಾಲಿಗೆ ಹರಿಬಿಡೋದು ಸರಿಯಲ್ಲ. ಚುನಾವಣೆಯಲ್ಲಿ ಸ್ಪರ್ಧಿಸಲು  ಕ್ಷೇತ್ರ ಸಿಕ್ಕಿಲ್ಲ ಎಂದು ಸಿದ್ದರಾಮಯ್ಯ ಮಾನಸಿಕ ಸ್ಥಿಮಿತ ಕಳೆದುಕೊಂಡು ಹೀಗೆ ಮಾತಾಡುತ್ತಿದ್ದಾರೆ. ಅಲ್ಲದೇ, ಕಾಂಗ್ರೆಸ್ ನಲ್ಲಿ ರಾಹುಲ್ ಗಾಂಧಿ ನಾಯಕತ್ವದಿಂದ ರೋಸಿ ಹೋಗಿ ಹೀಗೆ ಮಾತನಾಡುತ್ತಿರಬಹುದು ಎಂದು ಲೇವಡಿ ಮಾಡಿದರು.

ಭದ್ರಾ ಮೇಲ್ದಂಡೆ ಯೋಜನೆ ವಿಚಾರವಾಗಿ ರಾಜ್ಯ ಸರ್ಕಾರ 8 ಸಾವಿರ ಕೋಟಿ ರೂ ಅನುದಾನಕ್ಕೆ ಪ್ತಸ್ತಾವನೆ ಸಲ್ಲಿಸಿತ್ತು. ಕೇಂದ್ರ ಸರ್ಕಾರ 5300 ಕೋಟಿ ಅನುದಾನ ಒದಗಿಸಿದೆ. ಸಿದ್ದರಾಮಯ್ಯ ಅವರು ಈ ಬಗ್ಗೆಯೂ ಕೊಂಕು ಮಾತಾಡಿದ್ದಾರೆ. ಆದರೆ, ಅವರ ಕಾಲದಲ್ಲಿ ಏನು ಸಿಕ್ಕಿತ್ತು? ಅವರ ಕಾಲದಲ್ಲಿ ಎಷ್ಟು ಭ್ರಷ್ಟಾಚಾರ ಆಗಿತ್ತು ಅನ್ನೋದು ಜನರಿಗೆ ಗೊತ್ತಿದೆ ಎಂದು ತಿರುಗೇಟು ನೀಡಿದರು.

ಕಾಂಗ್ರೆಸ್ ಇದ್ದಾಗ ಕರ್ನಾಟಕ ರಾಜ್ಯದ ರೈಲ್ವೇಗೆ 600 ರಿಂದ 800 ಕೋಟಿ ರೂ ಮಾತ್ರ ಸಿಗ್ತಿತ್ತು. ಆದರೆ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ಬಳಿಕ ಪ್ರತಿ ಬಜೆಟ್ ನಲ್ಲಿ ಮೂರುವರೆ-ನಾಲ್ಕು ಸಾವಿರ ಕೋಟಿ ಅನುದಾನ ಒದಗಿಸಲಾಗುತ್ತಿದೆ. ಕಳೆದ ಬಾರಿ 3900 ಕೋಟಿ ಒದಗಿಸಲಾಗಿತ್ತು. ಈ ಬಾರಿ ಒಟ್ಟಾರೆ ರೈಲ್ವೇಗೆ 2 ಲಕ್ಷದ 40 ಸಾವಿರ ಕೋಟಿ ಅನುದಾನ ಒದಗಿಸಲಾಗಿದೆ. ಇದು 2013-14 ಕ್ಕೆ ಹೊಲಿಸಿದರೆ 9 ಪಟ್ಟು ಹೆಚ್ಚಿದೆ. ಕರ್ನಾಟಕಕ್ಕೂ ಇದರ ಲಾಭ ದೊರೆಯಲಿದೆ ಎಂದು ತಿಳಿಸಿದರು.

ಈ ಬಾರಿಯ ಬಜೆಟ್ ನಲ್ಲಿ ದೇಶದ ಆರ್ಥಿಕ ಪ್ರಗತಿಗೆ ಬಜೆಟ್ ನಲ್ಲಿ ಒತ್ತು ನೀಡಿದ್ದಲ್ಲದೆ, ದೇಶದ ಆರ್ಥಿಕ ಪ್ರಗತಿ ಬಡ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಹೆಚ್ವಿನ ಗಮನ ಹರಿಸಿ ನಿರ್ಮಲಾ ಸೀತಾರಾಮನ್ ಅವರು ಬಜೆಟ್'ನ್ನು ಅಚ್ಚುಕಟ್ಟಾಗಿ ರೂಪಿಸಿದ್ದಾರೆ ಎಂದು ಇದೇ ವೇಳೆ ಅಭಿಪ್ರಾಯ ವ್ಯಕ್ತಪಡಿಸಿದರು.

SCROLL FOR NEXT