ರಾಜ್ಯ

ಉಳ್ಳಾಲದಲ್ಲಿ ವೀರ ರಾಣಿ ಅಬ್ಬಕ್ಕನ ಥೀಮ್ ಪಾರ್ಕ್ ನಿರ್ಮಾಣವಾಗಬೇಕು: ಶೋಭಾ ಕರಂದ್ಲಾಜೆ

Manjula VN

ಉಳ್ಳಾಲ: ತೊಕ್ಕೊಟ್ಟಿನ ಉದ್ದೇಶಿತ ಜಾಗದಲ್ಲಿ ಉಳ್ಳಾಲದ ರಾಣಿ ಅಬ್ಬಕ್ಕ ಹೆಸರಲ್ಲಿ ಭವನ ನಿರ್ಮಾಣ ಮಾತ್ರವಲ್ಲದೆ ಜೀಟಿಗೆ ಹಿಡಿದು ಪೋರ್ಚುಗೀಸರನ್ನ ಸೋಲಿಸಿದ ವೀರರಾಣಿಯ ಚರಿತ್ರೆ ದೇಶಕ್ಕೆ ತಿಳಿಸುವ ಥೀಮ್ ಪಾರ್ಕ್ ನಿರ್ಮಾಣವಾಗಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರು ಶನಿವಾರ ಹೇಳಿದ್ದಾರೆ.

ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ನೆರಳಲ್ಲಿ ಉಳ್ಳಾಲದ ಮಹಾತ್ಮ ಗಾಂಧಿ ರಂಗ ಮಂದಿರದಲ್ಲಿ ಶನಿವಾರ ನಡೆದ "ವೀರ ರಾಣಿ ಅಬ್ಬಕ್ಕ ಉತ್ಸವ"ದಲ್ಲಿ ಸಭಾಧ್ಯಕ್ಷತೆ ವಹಿಸಿ ಶೋಭಾ ಕರಂದ್ಲಾಜೆಯವರು ಮಾತನಾಡಿದರು.

ರಾಣಿ ಅಬ್ಬಕ್ಕನಂತಹ ವೀರ ವನಿತೆಯರು ಬರೀ ಚರಿತ್ರೆಯಲ್ಲಿ ಅಷ್ಟೇ ಅಲ್ಲ, ಆಕೆಯ ಹೆಸರು ದೇಶದಾದ್ಯಂತ ವ್ಯಾಪಿಸಲು ರಾಜ್ಯ ಮಟ್ಟದ ಅಬ್ಬಕ್ಕ ಉತ್ಸವ ನಡೆಯುವಂತಾಗಬೇಕು. ತೊಕ್ಕೊಟ್ಟಿನಲ್ಲಿ 5 ಕೋಟಿ ವೆಚ್ಚದಲ್ಲಿ ಅಬ್ಬಕ್ಕ ಭವನ ನಿರ್ಮಿಸಲು ಡಿಪಿಆರ್ ಆಗಿದೆ. ಭವನದೊಳಗಡೆ ಅಬ್ಬಕ್ಕಳಂತಹ ಮಹಾನ್ ಸ್ವಾತಂತ್ರ್ಯ ಹೋರಾಟಗಾರರ ಸಿನೆಮಾಗಳನ್ನ ನಮ್ಮ ಭವಿಷ್ಯದ ಪೀಳಿಗೆಗೆ ತೋರಿಸಲು ಸುಸಜ್ಜಿತ ಥಿಯೇಟರ್ ಜೊತೆ ಅಬ್ಬಕ್ಕನ ಇತಿಹಾಸ ಹೇಳುವ ಥೀಮ್ ಪಾರ್ಕ್ ಕೂಡ ನಿರ್ಮಾಣವಾಗಬೇಕೆಂದು ಹೇಳಿದರು.

ವಿಧಾನ ಪರಿಷತ್ ಸಭಾಧ್ಯಕ್ಷ ಬಸವರಾಜ ಹೊರಟ್ಟಿ ಮಾತನಾಡಿ, ರಾಣಿ ಅಬ್ಬಕ್ಕ ದೇಶದ ಪ್ರಥಮ ಕೆಚ್ಚೆದೆಯ ಸ್ವಾತಂತ್ರ್ಯ ಹೋರಾಟಗಾರ್ತಿ, ಆಕೆಯ ಚರಿತ್ರೆಯನ್ನ ಪಠ್ಯ ಪುಸ್ತಕಗಳಲ್ಲಿ ಅಳವಡಿಸುವಂತಾಗಬೇಕು. ಅಬ್ಬಕ್ಕಳ ಹೆಸರಲ್ಲಿ ಇನ್ನೂ ಒಂದು ಭವನ ಕಟ್ಟಲು ಸಾಧ್ಯ ಆಗಿಲ್ಲ ಅನ್ನೋದೆ ಬೇಸರದ ವಿಚಾರ ಎಂದು ತಿಳಿಸಿದರು.

ರಾಜ್ಯದ ಎಲ್ಲಾ ಕಡೆಗಳಿಗೆ ಭರಪೂರ ಅನುದಾನ ಸಿಗುತ್ತೆ. ಅಬ್ಬಕ್ಕ ಭವನ ನಿರ್ಮಾಣಕ್ಕೆ ಅನುದಾನ ಮಂಜೂರಾದರೂ ಇನ್ನೂ ಯಾಕೆ ಬಿಡುಗಡೆ ಆಗಿಲ್ಲ. ಈ ಬಗ್ಗೆ ಸಂಬಂಧಪಟ್ಟವರಲ್ಲಿ ಮಾತುಕತೆ ನಡೆಸಿ ಅನುದಾನ ಬಿಡುಗಡೆಗೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆಂದರು.

SCROLL FOR NEXT