ರಾಜ್ಯ

ಬೆಂಗಳೂರು ಸರಣಿ ಅಪಘಾತ ಪ್ರಕರಣ; 2 ಸಾವು, ನಾಲ್ವರಿಗೆ ಗಾಯ; ಕಾರಿನ ಮೇಲೆ ಶಾಸಕರ ಸ್ಟಿಕ್ಕರ್!

Srinivasamurthy VN

ಬೆಂಗಳೂರು: ಬೆಂಗಳೂರಿನಲ್ಲಿ ನಿನ್ನೆ ಸಂಭವಿಸಿದ್ದ ಸರಣಿ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಲಭ್ಯವಾಗಿದ್ದು, ಕಾರು ಅರಣ್ಯ ಇಲಾಖೆಯ ನಿವೃತ್ತ ಅಧಿಕಾರಿ ರಾಮು ಸುರೇಶ್ ಎಂಬುವವರಿಗೆ ಸೇರಿದ್ದಾಗಿದೆ ಎನ್ನಲಾಗಿದೆ.

ನೃಪತುಂಗ ರಸ್ತೆಯಲ್ಲಿ ಚಾಲಕನೊಬ್ಬ ಇನ್ನೋವಾ ಕಾರನ್ನು ಅಡ್ಡಾದಿಡ್ಡಿಯಾಗಿ ಚಲಾಯಿಸಿದ್ದರಿಂದ ಸರಣಿ ಅಪಘಾತ ಸಂಭವಿಸಿ, ದ್ವಿಚಕ್ರ ವಾಹನ ಸವಾರರಿಬ್ಬರು ಮೃತಪಟ್ಟು ನಾಲ್ಕು ಮಂದಿ ಗಾಯಗೊಂಡಿದ್ದರು. ಮೃತರನ್ನು ‘ಎಚ್‌ಬಿಆರ್ ಲೇಔಟ್ ನಿವಾಸಿ ಮಜೀದ್‌ಖಾನ್ (36) ಹಾಗೂ ಕೆ.ಜಿ. ಹಳ್ಳಿ ನಿವಾಸಿ ಅಯ್ಯಪ್ಪ (60) ಎಂದು ಗುರುತಿಸಲಾಗಿದೆ. ಅಪಘಾತದಿಂದಾಗಿ ಮೊಹಮ್ಮದ್ ರಿಯಾಜ್, ಮೊಹಮ್ಮದ್ ಸಲೀಂ, ರಿಯಾಜ್ ಪಾಷಾ ಹಾಗೂ ಶೇರ್ ಗಿಲಾನಿ ಎಂಬುವರು ಗಾಯಗೊಂಡಿದ್ದು, ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.

‘ಅರಣ್ಯ ಇಲಾಖೆಯ ನಿವೃತ್ತ ಅಧಿಕಾರಿ ರಾಮು ಸುರೇಶ್ ಎಂಬುವವರಿಗೆ ಸೇರಿದ್ದ ಇನ್ನೋವಾ ಕ್ರಿಸ್ಟಾ ಕಾರನ್ನು (ಕೆಎ 50 ಎಂಎ 6600) ಯಲಹಂಕ ನ್ಯೂಟೌನ್‌ ನಿವಾಸಿ ಜಿ. ಮೋಹನ್ (48 ವರ್ಷ) ಎಂಬಾತ ಚಲಾಯಿಸುತ್ತಿದ್ದ. ಈತನ ಅತಿ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯಿಂದ ಅಪಘಾತ ಸಂಭವಿಸಿದೆ. ಚಾಲಕ ಮೋಹನ್‌ನನ್ನು ಬಂಧಿಸಿ, ಕಾರು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ತಿಳಿಸಿದರು.

ಅಂತೆಯೇ ಕಾರಿನ ಮೇಲೆ ‘ಸಾಗರ ಶಾಸಕ ಎಚ್‌. ಹಾಲಪ್ಪ ಅವರ ಹೆಸರಿನ ಸ್ಟಿಕ್ಕರ್ ಇತ್ತು. ರಾಮು ಸುರೇಶ್ ಅವರ ಕಾರಿಗೆ ಸ್ಟಿಕ್ಕರ್ ಕೊಟ್ಟವರು ಯಾರು? ಕಾರನ್ನು ಯಾರೆಲ್ಲ ಬಳಸುತ್ತಿದ್ದರು? ಎಂಬುದು ತನಿಖೆಯಿಂದ ತಿಳಿಯಬೇಕಿದೆ’ ಎಂದು ಹೇಳಿದರು. ಪೊಲೀಸ್ ಮೂಲಗಳ ಪ್ರಕಾರ ಕಾರು ಮಾಲೀಕ ರಾಮು ಸುರೇಶ್ ಅವರು ಶಾಸಕ ಹರತಾಳ್ ಹಾಲಪ್ಪ ಅವರ ಅಳಿಯನ ತಂದೆಯಾಗಿದ್ದು, ಶಾಸಕರ ಹೆಸರಿನಲ್ಲಿ ನೀಡಲಾದ ಪಾಸ್ ಅನ್ನು ಬಳಸುತ್ತಿದ್ದರು ಎನ್ನಲಾಗಿದೆ. 

ಅತಿ ವೇಗದ ಚಾಲನೆ:
‘ಕೆ.ಆರ್. ವೃತ್ತದಿಂದ ಕಾರ್ಪೋರೇಷನ್‌ ವೃತ್ತದವರೆಗಿನ ನೃಪತುಂಗ ರಸ್ತೆಯಲ್ಲಿ ನಿತ್ಯವೂ ವಾಹನಗಳ ದಟ್ಟಣೆ ಇರುತ್ತದೆ. ಸೋಮವಾರ ಮಧ್ಯಾಹ್ನ 3.30ರ ಸುಮಾರಿಗೆ ಈ ರಸ್ತೆಯಲ್ಲಿ ಹೊರಟಿದ್ದ ಚಾಲಕ ಮೋಹನ್, ಅತಿ ವೇಗವಾಗಿ ಇನ್ನೋವಾ ಕಾರು ಚಲಾಯಿಸಿದ್ದ. ರಸ್ತೆಯಲ್ಲಿ ತೆರಳುತ್ತಿದ್ದ ಎರಡು ಕಾರು (ಟೊಯೊಟಾ ಇಡಿಯೊಸ್ ಹಾಗೂ ಮಾರುತಿ ಆಲ್ಟೊ) ಹಾಗೂ ಮೂರು ದ್ವಿಚಕ್ರ ವಾಹನಗಳಿಗೆ (ಬಜಾಜ್ ಪಲ್ಸರ್ ಹಾಗೂ ಎರಡು ಹೊಂಡಾ ಆಕ್ಟಿವಾ) ಇನ್ನೋವಾ ಕಾರು ಡಿಕ್ಕಿ ಹೊಡೆದಿತ್ತು.

ಕಾರಿನಲ್ಲಿದ್ದವರಿಗೂ ಸಣ್ಣಪುಟ್ಟ ಗಾಯವಾಗಿದೆ. ದ್ವಿಚಕ್ರ ವಾಹನದಿಂದ ರಸ್ತೆಗೆ ಬಿದ್ದಿದ್ದ ಮಜೀದ್‌ಖಾನ್ ಮೇಲೆಯೇ ಕಾರಿನ ಚಕ್ರ ಹರಿದಿತ್ತು. ತೀವ್ರ ಗಾಯಗೊಂಡು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೊಂದು ದ್ವಿಚಕ್ರ ವಾಹನದಲ್ಲಿದ್ದ ಅಯ್ಯಪ್ಪ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆಸ್ಪತ್ರೆಯಲ್ಲೇ ಅವರು ಅಸುನೀಗಿದ್ದಾರೆ. ಉಳಿದಂತೆ ನಾಲ್ವರು ತೀವ್ರ ಗಾಯಗೊಂಡಿದ್ದು, ಅವರ ಸ್ಥಿತಿಯೂ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದರು.

‘ಮೃತ ಮಜೀದ್ ಖಾನ್, ಆಟೊಮೊಬೈಲ್ ಬಿಡಿಭಾಗಗಳ ಮಾರಾಟಗಾರರಾಗಿದ್ದು, ಅಯ್ಯಪ್ಪ, ಪಾರ್ಕಿಂಗ್ ಜಾಗವೊಂದರ ವ್ಯವಸ್ಥಾಪಕರಾಗಿದ್ದಾರೆ ಎಂದು ತಿಳಿದುಬಂದಿದೆ.
 

SCROLL FOR NEXT