ರಾಜ್ಯ

ನಾಳೆಯಿಂದ ಫೆ.24ರವರೆಗೆ ವಿಧಾನಮಂಡಲ ಬಜೆಟ್ ಅಧಿವೇಶನ, ವಿಧಾನಸೌಧದ 2 ಕಿ.ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ

Sumana Upadhyaya

ಬೆಂಗಳೂರು: ರಾಜ್ಯ ವಿಧಾನಮಂಡಲ  ಬಜೆಟ್ ಅಧಿವೇಶನ ನಾಳೆ ಆರಂಭವಾಗಲಿದೆ. ಉಭಯ ಸದನಗಳ ಜಂಟಿ ಅಧಿವೇಶನವನ್ನುದ್ದೇಶಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್  ಭಾಷಣ ಮಾಡಲಿದ್ದಾರೆ.

ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ರಾಜಭವನದಲ್ಲಿ ನಿನ್ನೆ ರಾಜ್ಯಪಾಲರನ್ನು ಭೇಟಿ ಮಾಡಿ ಅಧಿವೇಶನಕ್ಕೆ ಆಗಮಿಸುವಂತೆ ಆಹ್ವಾನಿಸಿದ್ದಾರೆ.

ನಾಳೆಯಿಂದ ಫೆಬ್ರವರಿ 24ರವರೆಗೆ ಅಧಿವೇಶನ ನಡೆಯಲಿದ್ದು, ರಾಜ್ಯಪಾಲರ ಭಾಷಣದ ಮೇಲೆ ಸೋಮವಾರದಿಂದ ಚರ್ಚೆಗಳು ನಡೆಯಲಿವೆ. ಈ ಅವಧಿಯ ವಿಧಾನಸಭೆಯ ಕೊನೆಯ ಅಧಿವೇಶನ ಇದಾಗಿದ್ದು, ಇನ್ನು ಎರಡು ತಿಂಗಳಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಹಲವು ರಾಜಕೀಯ ಚರ್ಚೆಗಳಿಗೆ ಸದನ ಸಾಕ್ಷಿಯಾಗಲಿದೆ. 

ಫೆಬ್ರವರಿ 17ರಂದು ಬಜೆಟ್ ಮಂಡನೆ; ಇದೇ 17ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2023-24ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ. ವಿಧಾನಮಂಡಲ ಅಧಿವೇಶನ ಹಿನ್ನೆಲೆಯಲ್ಲಿ ಇಂದು ಸಚಿವ ಸಂಪುಟ ಸಭೆ ನಡೆಯಲಿದೆ.

ನಿಷೇಧಾಜ್ಞೆ ಜಾರಿ: ಫೆಬ್ರವರಿ 10 ರಿಂದ 24 ರವರೆಗೆ ರಾಜ್ಯ ಬಜೆಟ್ ಅಧಿವೇಶನ ಅಧಿವೇಶನ ಹಿನ್ನೆಲೆಯಲ್ಲಿ ವಿಧಾನಸೌಧ ಸುತ್ತಮುತ್ತ 2 ಕಿ.ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ವಿಧಾನಸೌಧದ ಸುತ್ತಮುತ್ತ 2 ಕಿ.ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರಲಿದ್ದು, 5 ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ. ಮೆರವಣಿಗೆ, ಪ್ರತಿಭಟನೆಗೆ, ಸಭೆ ಆಯೋಜನೆಗೆ ನಿಷೇಧ ಹೇರಲಾಗಿದೆ.

ಈ ವೇಳೆ ಯಾವುದೇ ಪ್ರತಿಕೃತಿಗಳ ದರ್ಶನ ಹಾಗೂ ದಹನ ಮಾಡುವಂತಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಆದೇಶ ಹೊರಡಿಸಿದ್ದಾರೆ. ಅಧಿವೇಶನದ ಕಾರ್ಯಕಲಾಪಗಳಿಗೆ ಅಡಚಣೆ, ಸಾರ್ವಜನಿಕ ನೆಮ್ಮದಿಗೆ ಭಂಗ, ಸುಗಮ ಸಂಚಾರಕ್ಕೆ ತೊಂದರೆಯಾಗದಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸಿ.ಹೆಚ್. ಪ್ರತಾಪ್ ರೆಡ್ಡಿಯವರು ಐಪಿಸಿ ಸೆಕ್ಷನ್ 144 ರ ಪ್ರಕಾರ ಪ್ರತಿಬಂಧಕಾಜ್ಞೆ ಜಾರಿಮಾಡಿ ಆದೇಶಿಸಿದ್ದಾರೆ.

SCROLL FOR NEXT