ರಾಜ್ಯ

ಲೋಕ ಅದಾಲತ್‌: ಸಂಧಾನ ಮೂಲಕ 64.13 ಲಕ್ಷ ಪ್ರಕರಣಗಳು ಇತ್ಯರ್ಥ, ಸಾರ್ವಕಾಲಿಕ ದಾಖಲೆ

Manjula VN

ಬೆಂಗಳೂರು: ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ (ಕೆಎಸ್‌ಎಲ್‌ಎಸ್‌ಎ) ಫೆಬ್ರವರಿ 11, 2023 ರಂದು ನಡೆಸಿದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಒಂದೇ ದಿನದಲ್ಲಿ 64.13 ಲಕ್ಷ ಪ್ರಕರಣಗಳನ್ನು ಸಂಧಾನದ ಮೂಲಕ ಇತ್ಯರ್ಥಪಡಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ.

ಈ ಕುರಿತು ಸೋಮವಾರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿರುವ ಕೆಎಸ್‌ಎಲ್‌ಎಸ್‌ಎ ಅಧ್ಯಕ್ಷ ನ್ಯಾಯಮೂರ್ತಿ ಬಿ ವೀರಪ್ಪ ಅವರು, 62.26 ಲಕ್ಷ ವ್ಯಾಜ್ಯ ಪೂರ್ವ ಪ್ರಕರಣಗಳು, 4.14 ಕಂದಾಯ ಇಲಾಖೆ ಪ್ರಕರಣಗಳು, 670 ಮ್ಯಾಟ್ರಿಮೋನಿಯಲ್ ಪ್ರಕರಣಗಳು ಮತ್ತು 2,724 ಆಸ್ತಿ ವಿಭಜನೆ ದಾವೆ ಪ್ರಕರಣಗಳನ್ನು ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ. ಈ ಹಿಂದಿನ ಲೋಕ ಅದಾಲತ್‌ಗಳಿಗೆ ಹೋಲಿಸಿದರೆ ಇದು ಸಾರ್ವಕಾಲಿಕ ದಾಖಲೆಯಾಗಿದೆ ಎಂದು ಹೇಳಿದರು.

ನವೆಂಬರ್ 12, 2022 ರಂದು ನಡೆದ ಲೋಕ ಅದಾಲತ್‌ನಲ್ಲಿ 14.77 ಲಕ್ಷ ಪ್ರಕರಣಗಳನ್ನು ಇತ್ಯರ್ಥಪಡಿಸುವ ಮೂಲಕ ಕೆಎಸ್‌ಎಲ್‌ಎಸ್‌ಎ ತನ್ನ ಹಿಂದಿನ ದಾಖಲೆಯನ್ನು ಮುರಿದಿದೆ ತಿಳಿಸಿದರು.

ಮೋಟಾರು ಅಪಘಾತ ಪರಿಹಾರಕ್ಕೆ ಸಂಬಂಧಿಸಿದ ಒಟ್ಟು 4,050 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, 179 ಕೋಟಿ ರೂಪಾಯಿ ಪರಿಹಾರ ಕೊಡಿಸಲಾಗಿದೆ. ಹಾಸನದ ಹಿರಿಯ ಸಿವಿಲ್ ನ್ಯಾಯಾಧೀಶರ ಕೋರ್ಟ್‌ನಲ್ಲಿದ್ದ ಪ್ರಕರಣವೊಂದರಲ್ಲಿ 1.25 ಕೋಟಿ ರೂಪಾಯಿ ಪರಿಹಾರವನ್ನು ವಿಮಾ ಸಂಸ್ಥೆಯ ಮೂಲಕ ಕೊಡಿಸಲಾಗಿದೆ.

ಉಡುಪಿಯ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಬಾಕಿ ಇದ್ದ 23 ವರ್ಷ ಹಳೆಯ ಆಸ್ತಿ ಪಾಲಿನ ಕುರಿತಾದ ದಾವೆ ಹಾಗೂ ಬಳ್ಳಾರಿಯ ಹೊಸಪೇಟೆ ತಾಲ್ಲೂಕಿನ ಹಿರಿಯ ಸಿವಿಲ್ ನ್ಯಾಯಾಧೀಶರ ಮುಂದೆ ಬಾಕಿ ಇದ್ದ 22 ವರ್ಷ ಹಳೆಯ ಆಸ್ತಿ ವಿಭಜನೆಯ ದಾವೆಯನ್ನು ರಾಜೀ ಮೂಲಕ ಇತ್ಯರ್ಥಪಡಿಸಲಾಗಿದೆ.

SCROLL FOR NEXT