ರಾಜ್ಯ

ಆರು ದಶಕಗಳಿಂದ ಮರೀಚೆಕೆಯಾದ ಮೂಲಭೂತ ಸೌಕರ್ಯ: ಚುನಾವಣೆ ಬಹಿಷ್ಕಾರಕ್ಕೆ ಚೂಡಹಳ್ಳಿ ಗ್ರಾಮಸ್ಥರು ಮುಂದು

Srinivas Rao BV

ನವದೆಹಲಿ: ಆನೇಕಲ್ ತಾಲೂಕಿನಲ್ಲಿ ಮೂಲಸೌಕರ್ಯ ವಂಚಿತ ಚೂಡಹಳ್ಳಿ ಗ್ರಾಮಸ್ಥರು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಲು ನಿರ್ಧರಿಸಿದ್ದಾರೆ. 

60 ವರ್ಷಗಳಿಂದ ಗ್ರಾಮ ಮೂಲಭೂತ ಸೌಕರ್ಯ ವಂಚಿತವಾಗಿದ್ದು, ಚುನಾವಣಾ ಸಮಯದಲ್ಲಿ ಜನಪ್ರತಿನಿಧಿಗಳ ಸುಳ್ಳು ಭರವಸೆಗಳಿಗೆ ತುತ್ತಾಗಿರುವುದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಸುಳ್ಳು ಭರವಸೆಗಳಿಂದ ಬೇಸತ್ತಿರುವ ಗ್ರಾಮಸ್ಥರು, ಸಾಮೂಹಿಕವಾಗಿ ಚುನಾವಣೆಯನ್ನು ಬಹಿಷ್ಕರಿಸುತ್ತಿರುವುದಾಗಿ ಘೋಷಿಸಿದ್ದಾರೆ. ಗ್ರಾಮಸ್ಥರಿಗೆ ಚುನಾವಣೆಯನ್ನು ಬಹಿಷ್ಕರಿಸಲು ಕರೆ ನೀಡಲಾಗಿದೆ. 

ತಮ್ಮ ನಿರ್ಧಾರವನ್ನು ತಹಶೀಲ್ದಾರ್ ಅವರಿಗೆ ಪತ್ರದ ಮೂಲಕ ತಿಳಿಸಿರುವ ಗ್ರಾಮಸ್ಥರು, "ಗ್ರಾಮದಲ್ಲಿ 5 ನೇ ತರಗತಿವರೆಗೂ ಶಾಲೆ ಇದ್ದರೂ ಶಿಕ್ಷಕರು ಈ ಗ್ರಾಮ ತಲುಪುವುದಕ್ಕೆ ಅತ್ಯಂತ ಪ್ರಯಾಸ ಪಡುತ್ತಾರೆ. 6 ನೇ ತರಗತಿಗೆ ಕಾಡು ರಸ್ತೆಯನ್ನು ಹಾದು ಚಿಕ್ಕ ಹೊಸಹಳ್ಳಿ ಇಂಡ್ಲವಾಡಿ ಅಥವಾ ಆನೇಕಲ್ ಗೆ ಬರಬೇಕು ಆ ರಸ್ತೆಯ ಗುಣಮಟ್ಟವೂ ತೀರಾ ಹದಗೆಟ್ಟಿದೆ" ಎಂದು ಆರೋಪಿಸಿದ್ದಾರೆ.

 "ವಿದ್ಯಾರ್ಥಿಗಳು ಶಾಲೆಗೆ ಹೋಗುವುದಕ್ಕೆ ಯುವಕರು ಕಾರ್ಖಾನೆಗಳಿಗೆ ಹೋಗುವುದಕ್ಕೆ, ಸರಕು ಸಾಗಣೆಗೂ ಇದೇ ಮಾರ್ಗ ಬಳಸಬೇಕಾಗಿದ್ದು, ಹದಗೆಟ್ಟ ರಸ್ತೆಯಲ್ಲಿ ಬಿದ್ದು ಅನೇಕರು ಕಾಲು ಮುರಿದುಕೊಂಡಿದ್ದಾರೆ. ಇನ್ನೂ ಕೆಲವೆಡೆ ಅರಣ್ಯ ಇಲಾಖೆಯವರು ಜಮೀನುಗಳನ್ನು ನಮಗೆ ಸೇರಿದೆ ಎಂದು ಗ್ರಾಮಸ್ಥರಿಗೆ ಕೃಷಿ ಚಟುವಟಿಕೆಗೆ ಅವಕಾಶ ನೀಡುತ್ತಿಲ್ಲ, ಈ ಬಗ್ಗೆ ಪರಿಶೀಲಿಸಬೇಕು" ಎಂದು ತಮ್ಮ ಸಮಸ್ಯೆಗಳನ್ನು ತಿಳಿಸಿದ್ದಾರೆ. ಇತ್ತೀಚಿನ ಮಾಹಿತಿಯ ಪ್ರಕಾರ ತಹಶೀಲ್ದಾರ್ ಅವರು ಸ್ಥಳ ಪರಿಶೀಲನೆಗೆ ಸೂಚನೆ ನೀಡಿದ್ದಾರೆ.

SCROLL FOR NEXT