ರಾಜ್ಯ

ಉಪ ಲೋಕಾಯುಕ್ತರ ನೇಮಕ: ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ನೋಟಿಸ್ ಜಾರಿ

Ramyashree GN

ಬೆಂಗಳೂರು: 2022ರ  ಜೂನ್ ತಿಂಗಳಿಂದ ಖಾಲಿ ಇರುವ ಉಪ ಲೋಕಾಯುಕ್ತ ಹುದ್ದೆಯನ್ನು ಭರ್ತಿ ಮಾಡಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಮಾಜ ಪರಿವರ್ತನ ಸಮುದಾಯ (ಎಸ್‌ಪಿಎಸ್) ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಆಧರಿಸಿ ಕರ್ನಾಟಕ ಹೈಕೋರ್ಟ್ ಗುರುವಾರ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ಜಾರಿ ಮಾಡಿದೆ.

ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್ ಕಿಣಗಿ ಅವರಿದ್ದ ವಿಭಾಗೀಯ ಪೀಠವು ಅರ್ಜಿಯ ವಿಚಾರಣೆ ನಡೆಸಿದ ನಂತರ ನೋಟಿಸ್ ಜಾರಿ ಮಾಡಲು ಆದೇಶ ನೀಡಿತು. 

ಸಮಾಜ ಪರಿವರ್ತನ ಸಮುದಾಯದ ಅಧ್ಯಕ್ಷ ಎಸ್‌ಆರ್ ಹಿರೇಮಠ್ ಅವರು, ಉಪ ಲೋಕಾಯುಕ್ತರ ನೇಮಕವಾಗಿಲ್ಲದ ಕಾರಣದಿಂದಾಗಿ ಬಾಕಿ ಇರುವ ಹಲವು ಪ್ರಕರಣಗಳನ್ನು ಪೂರ್ಣಗೊಳಿಸಲು ಲೋಕಾಯುಕ್ತಕ್ಕೆ ಸಾಧ್ಯವಾಗುತ್ತಿಲ್ಲ. ಹಲವಾರು ವರ್ಷಗಳಿಂದ ದೂರುಗಳಲ್ಲಿ ಭಾರಿ ಹೆಚ್ಚಳವಾಗಿದೆ ಎಂದು ದೂರಿದ್ದರು.

ಸರ್ಕಾರಿ ಯಂತ್ರದ ವಿರುದ್ಧದ ಕುಂದುಕೊರತೆಗಳು ದೊಡ್ಡದಾಗಿವೆ ಮತ್ತು ಕಾರಣಗಳನ್ನು ಗ್ರಹಿಸುವುದು ತುಂಬಾ ಕಷ್ಟವಲ್ಲ. ಉಪ ಲೋಕಾಯುಕ್ತರನ್ನು ನೇಮಿಸುವ ವಿಚಾರದಲ್ಲಿ ಸರ್ಕಾರ ನಿದ್ರಾವಸ್ಥೆಯಲ್ಲಿದೆ ಎಂದಿರುವ ಅರ್ಜಿದಾರರು, ಶೀಘ್ರವೇ ಉಪ ಲೋಕಾಯುಕ್ತರನ್ನು ನೇಮಕ ಮಾಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು.

SCROLL FOR NEXT