ರಾಜ್ಯ

ಪರ್ಯಾಯ ಸಮ್ಮೇಳನ ಆಯೋಜಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ: ಸಚಿವ ಸುನೀಲ್ ಕುಮಾರ್

Manjula VN

ಹಾವೇರಿ: ಹಾವೇರಿಯಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಆಯೋಜಕರು ಮುಸ್ಲಿಂ ಸಾಹಿತಿಗಳು ಹಾಗೂ ಕವಿಗಳನ್ನು ಕಡೆಗಣಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಈ ಸಂಬಂಧ ಬಂಡಾಯ ಎದ್ದಿರುವ ಕೆಲ ಹಿರಿಯ ಸಾಹಿತಿಗಳು ಪರ್ಯಾಯ ಸಮ್ಮೇಳನ ಆಯೋಜಿಸಲು ಮುಂದಾಗಿದ್ದಾರೆ.

ಈ ಸಂಬಂಧ ಇಂದು ಹಾವೇರಿಯಲ್ಲಿ ಆರಂಭವಾಗಿರುವ 86ನೇ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳುವುದಕ್ಕೂ ಮುನ್ನ ಮಾತನಾಡಿದ  ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಅವರು, ಸರ್ಕಾರದ ವತಿಯಿಂದ ನಡೆಯುತ್ತಿರುವ ಸಮ್ಮೇಳನಕ್ಕೆ ವಿರುದ್ಧವಾಗಿ ಪರ್ಯಾಯ ಸಮ್ಮೇಳನ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಹೇಳಿದ್ದಾರೆ.

ದೊಡ್ಡ ಕಾರ್ಯಕ್ರಮದಲ್ಲಿ ಸಣ್ಣಪುಟ್ಟ ವ್ಯತ್ಯಾಸವಾಗಬಹುದು. ಅದನ್ನು ಚರ್ಚಿಸಿ ಬಗೆಹರಿಸಿಕೊಳ್ಳಬೇಕು. ಭಾಷೆಯ ಬೆಳವಣಿಗೆಯ ದೃಷ್ಟಿಯಿಂದ ಮಹತ್ವವಾಗಿರುವ ಈ ಸಮ್ಮೇಳನ, ನಾಡಿನ ಜನತೆಗೆ ಒಳ್ಳೆಯ ಸಂದೇಶ ನೀಡಲಿದೆ. ಕನ್ನಡವೇ ಸತ್ಯ, ಕನ್ನಡವೇ ನಿತ್ಯ ಎಂಬುದನ್ನು ಸಾರಲಿದೆ ಎಂದು ತಿಳಿಸಿದರು.

ಕೆಲ ದಿನಗಳ ಹಿಂದಷ್ಟೇ ಕನ್ನಡ ಸಾಹಿತ್ಯ ಪರಿಷತ್ತು, ಸಮ್ಮೇಳನದಲ್ಲಿ ಭಾಗವಹಿಸುವ ಸಾಹಿತಿಗಳು ಮತ್ತು ಕವಿಗಳ ಹೆಸರನ್ನು ಪ್ರಕಟಿಸಿತ್ತು. ಈ ವೇಳೆ ಕನ್ನಡ ಬರಹಗಾರರ ಒಂದು ವಿಭಾಗವು ಮುಸ್ಲಿಂ ಲೇಖಕರನ್ನು ಕಣೆಗಣಿಸಲಾಗಿದೆ ಎಂದು ಆಕ್ಷೇಪಿಸಿದ್ದರು. ರಾಜ್ಯದಲ್ಲಿ ನೂರಾರು ಮುಸ್ಲಿಂ ಕನ್ನಡ ಲೇಖಕರಿದ್ದು, ಸಮ್ಮೇಳನಕ್ಕೆ ಕೆಲವರನ್ನು ಮಾತ್ರ ಪರಿಗಣಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದರು.

SCROLL FOR NEXT