ರಾಜ್ಯ

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ನಗರ ಪ್ರದಕ್ಷಿಣೆ ಪುನರ್ ಆರಂಭ

Nagaraja AB

ಬೆಂಗಳೂರು: ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಎರಡು ತಿಂಗಳ ವಿರಾಮದ ಬಳಿಕ ನಿನ್ನೆಯಿಂದ ನಾಗರಿಕ ಕಾಮಗಾರಿಗಳ ಪರಿಶೀಲನೆ ಕಾರ್ಯವನ್ನು ಪುನರ್ ಆರಂಭಿಸಿದ್ದಾರೆ.

ಪೂರ್ವ ವಲಯದ ಮಲ್ಲೇಶ್ವರಂ ಉಪ ವಿಭಾಗೀಯ ವ್ಯಾಪ್ತಿಯಲ್ಲಿ ಅನುಷ್ಟಾನವಾಗುತ್ತಿರುವ ಕಾಮಗಾರಿಗಳನ್ನು ಪರಿಶೀಲಿಸಿದ ಗಿರಿನಾಥ್, ಎಂಇಎಸ್ ಕಾಲೇಜ್ ರಸ್ತೆಯಲ್ಲಿ ಸರಿಯಾದ ಪಾದಚಾರಿ ಮಾರ್ಗವನ್ನು ನಿರ್ಮಿಸಬೇಕು, ಒಳಚರಂಡಿಯಿಂದ ಹೂಳು ತೆಗೆಯಬೇಕು ಎಂದು ಎಂಜಿನಿಯರ್ ಹಾಗೂ ಗುತ್ತಿಗೆದಾರರಿಗೆ ನಿರ್ದೇಶಿಸಿದರು.

ಮಲ್ಲೇಶ್ವರಂ 8ನೇ ಮುಖ್ಯರಸ್ಥೆಯಲ್ಲಿ ಮರಗಳನ್ನು ಬೆಳೆಸುವಂತೆ ಪಾಲಿಕೆ ಅರಣ್ಯ ವಿಭಾಗಕ್ಕೆ ನಿರ್ದೇಶಿಸಿದರು. ಟ್ರಾನ್ಸ್ ಫಾರ್ಮರ್ ಅಳವಡಿಸಲಾಗುತ್ತಿದ್ದ ಪ್ರದೇಶಕ್ಕೆ ತೆರಳಿದ ಮುಖ್ಯ ಆಯುಕ್ತರು, ಗುತ್ತಿಗೆದಾರರ ಹೆಸರು, ಮೊಬೈಲ್ ನಂಬರ್ ಮತ್ತು ಅವಧಿ ಪೂರ್ಣಗೊಳುವ ದಿನಾಂಕವನ್ನು ಪ್ರದರ್ಶಿಸುವಂತೆ ಎಂಜಿನಿಯರ್ ಗೆ ಸೂಚಿಸಿದರು.

ಹೆಚ್ ಎನ್ ನಂಜುಂಡಯ್ಯ ರಸ್ತೆಯ ಫುಟ್ ಪಾತ್ ನಲ್ಲಿ ತ್ಯಾಜ್ಯ ಸುರಿದಿದ್ದ ಗುತ್ತಿಗೆದಾರರೊಬ್ಬರಿಗೆ ರೂ. 1,000 ದಂಡ ವಿಧಿಸಿದರು. ಫುಟ್ ಪಾತ್ ನಲ್ಲಿ ಕಸ ಸುರಿಯುವ ಅಫಾರ್ಟ್ ಮೆಂಟ್ ನಿವಾಸಿಗಳಿಗೆ ದಂಡ ಹಾಕುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು. ಎರಡು ಗಂಟೆಗಳ ಅವಧಿಯ ಪರಿಶೀಲನೆ ವೇಳೆಯಲ್ಲಿ ಅಜಾದ್ ಆಟದ ಮೈದಾನ ಮತ್ತಿತರ ಮೂಲಸೌಕರ್ಯ ಕಾಮಗಾರಿಗಳನ್ನು ಪರಿಶೀಲಿಸಿದರು. 

SCROLL FOR NEXT