ರಾಜ್ಯ

ಕೆ.ಆರ್.ಪುರಂ ಹಿಟ್ ಆ್ಯಂಡ್ ರನ್ ಕೇಸ್: ಇಬ್ಬರು ಮಹಿಳೆಯರ ಸಾವಿಗೆ ಕಾರಣನಾಗಿದ್ದ ಟೆಕ್ಕಿ ಬಂಧನ

Manjula VN

ಬೆಂಗಳೂರು: ಹಿಟ್ ಆ್ಯಂಡ್ ರನ್ ಪ್ರಕರಣವೊಂದರಲ್ಲಿ ಇಬ್ಬರು ಮಹಿಳೆಯರ ಸಾವಿಗೆ ಕಾರಣನಾಗಿದ್ದ ಟೆಕ್ಕಿಯೊಬ್ಬನನ್ನು ಪೊಲೀಸರು ಶನಿವಾರ ಬಂಧನಕ್ಕೊಳಪಡಿಸಿದ್ದಾರೆ.

ಗುಂಟೂರು ಮೂಲದ ಸಾಫ್ಟ್ ವೇರ್ ಎಂಜಿನಿಯರ್ ಬಯ್ಯ ವೆಂಕಟ ಸಂತೋಷ್ ಅಭಿರಾಮ್ ನನ್ನು ಬಂಧನಕ್ಕೊಳಪಡಿಸಿರುವ ಕೆ.ಆರ್.ಪುರಂ ಸಂಚಾರಿ ಪೊಲೀಸರು, ಆತನಿಂದ ಇನ್ನೋವಾ ಕಾರನ್ನು ವಶಕ್ಕೆ ಪಡೆದುಕೊಂದಿದ್ದಾರೆ.

ಶುಕ್ರವಾರ ರಾತ್ರಿ 9 ಗಂಟೆಯ ಸುಮಾರಿಗೆ ಅತೀವೇಗವಾಗಿ ಕಾರು ಚಲಾಯಿಸಿಕೊಂಡು ಬಂದಿರುವ ಸಂತೋಷ್, ಆಟೋಗೆ ಗುದ್ದಿಸಿ ಪರಾರಿಯಾಗಿದ್ದ. ಇದರಿಂದ ಹಜೀರಾ (40) ಮತ್ತು ಅವರ ಸೊಸೆ ಹಸೀನಾ ಸಾವನ್ನಪ್ಪಿದ್ದರು.

ಘಠನೆಯಲ್ಲಿ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಬಾಲಕಿಯರು ಹಾಗೂ ಹಸೀನಾ ಅವರ ಪತಿಗೆ ಗಂಭೀರ ಗಾಯಗಳಾಗಿದ್ದವು.

ಗಾಯಗೊಂಡವರನ್ನು ಸುಮಯ್ಯ (5) ಮತ್ತು ಸಾದಿಯಾ (3), ಆಟೋ ಚಾಲಕ ಹಸೀನಾಳ ಪತಿ ಖಾಲಿದ್ ಖಾನ್ (39) ಎಂದು ಗುರುತಿಸಲಾಗಿದೆ. ಮೂವರೂ ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ತಿಳಿದುಬಂದಿದೆ.

ಆಟೋ ಇದ್ದಕ್ಕಿದ್ದಂತೆ ಮುಖ್ಯ ರಸ್ತೆಯಲ್ಲಿ ಬಂದಿದ್ದರಿಂದ ಅಪಘಾತವನ್ನು ತಪ್ಪಿಸಲು ಸಾಧ್ಯವಾಗಲಿಲ್ಲ ಎಂದು ಆರೋಪಿ ಸಂತೋಷ್ ಅಭಿರಾಮ್ ವಿಚಾರಣೆ ವೇಳೆ ಹೇಳಿಕೊಂಡಿದ್ದಾನೆ.

ಅಪಘಾತ ಸ್ಥಳದಲ್ಲಿ ವಾಹನ ಕುರಿತು ಯಾವುದೇ ಸಾಕ್ಷ್ಯಾಧಾರಗಳು ಸಿಗದ ಕಾರಣ, ಹೊಸಕೋಟೆಯಲ್ಲಿನ ಟೋಲ್‌ನ ಸಿಸಿಟಿವಿ ಕ್ಯಾಮೆರಾ ದೃಶ್ಯಗಳ ಜೊತೆಗೆ ಕಾರಿನ ಫಾಸ್ಟ್‌ಟ್ಯಾಗ್ ವಿವರಗಳನ್ನು ಪರಿಶೀಲಿಸಿದೆವು. ಈತ ಹೊಸಕೋಟೆಯಲ್ಲಿ ನೆಲೆಸಿರುವುದು ತಿಳಿದು ಆತನನ್ನು ಆತನ ಮನೆಯಿಂದಲೇ ಬಂಧಿಸಿದೆವು. ಆರೋಪಿಯು ತಪ್ಪಿಸಿಕೊಳ್ಳಲು ಪ್ರಯತ್ನಿಸಲಿಲ್ಲ. ಅಪಘಾತ ಚಿಕ್ಕದಾಗಿದೆ ಎಂದು ಭಾವಿಸಿದ್ದರಿಂದ ಇಬ್ಬರು ಮಹಿಳೆಯರ ಸಾವಿನ ಬಗ್ಗೆ ಆತನಿಗೆ ಮಾಹಿತಿ ಇರಲಿಲ್ಲ. ಇದೀಗ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

SCROLL FOR NEXT