ರಾಜ್ಯ

ಸ್ಯಾಂಕಿ ಟ್ಯಾಂಕ್ ಬಳಿ ಮೇಲ್ಸೇತುವೆ ನಿರ್ಮಾಣ ಪ್ರಗತಿಯಲ್ಲಿದೆ: ಬಿಬಿಎಂಪಿ

Manjula VN

ಬೆಂಗಳೂರು: ಸ್ಯಾಂಕಿ ಟ್ಯಾಂಕ್ ರಸ್ತೆ ಬಳಿಯ ಉದ್ದೇಶಿತ ಮೇಲ್ಸೇತುವೆಗೆ ಕಾರ್ಯಕರ್ತರು ಮತ್ತು ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸುತ್ತಿದ್ದರೂ, ಬಿಬಿಎಂಪಿ ಮಾತ್ರ ತನ್ನ ಯೋಜನೆಯಿಂದ ಹಿಂದೆ ಸರಿಯುತ್ತಿಲ್ಲ.

ವರದಿ ಪ್ರಕಾರ, ಭಾಷ್ಯಂ ವೃತ್ತದಿಂದ ಮಲ್ಲೇಶ್ವರಂ 18ನೇ ಕ್ರಾಸ್‌ವರೆಗೆ ಸ್ಯಾಂಕಿ ರಸ್ತೆ ಅಗಲೀಕರಣಕ್ಕೆ ಬಿಬಿಎಂಪಿ ಮುಂದಾಗಿದೆ ಎಂದು ತಿಳಿದುಬಂದಿದೆ.

ಯೋಜನೆಗೆ 40 ಪೂರ್ಣ ಬೆಳೆದ ಮರಗಳನ್ನು ಕಡಿಯುವ ಅಗತ್ಯವಿದ್ದು, ಇದು ಸ್ಯಾಂಕಿ ಟ್ಯಾಂಕ್ ಬಂಡ್ ರಸ್ತೆ ಮೇಲೆ ಪರಿಣಾಮ ಬೀರಬಹುದು ಎಂದು ನಿವಾಸಿಗಳು ಮತ್ತು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೂಡಲೇ ಯೋಜನೆ ಕೈಬಿಡುವಂತೆ ಪಾಲಿಕೆಗೆ ಒತ್ತಾಯಿಸುತ್ತಿದ್ದಾರೆ.

ಈ ನಡುವೆ ರಸ್ತೆ ವಿಸ್ತರಣೆ ಹಾಗೂ ಮೇಲ್ಸೇತುವೆಗೆ ನಾಗರಿಕ ಸಮಾಜದ ಸಂಘಟನೆಯಾದ Jhatkaa.Org ಯೋಜನೆ ವಿರುದ್ಧ ಆನ್‌ಲೈನ್ ಸಹಿ ಅಭಿಯಾನವನ್ನು ಪ್ರಾರಂಭಿಸಿದೆ.

Jhatkaa.Org ಪ್ರಚಾರ ನಿರ್ದೇಶಕಿ ದಿವ್ಯಾ ನಾರಾಯಣ್ ಅವರು ಮಾತನಾಡಿ, ನಗರದ ಟ್ರಾಫಿಕ್ ಸಮಸ್ಯೆಗೆ ಮೇಲ್ಸೇತುವೆ ಮದ್ದು ಎಂಬ ತಪ್ಪು ಕಲ್ಪನೆ ಇದೆ. ಮೇಲ್ಸೇತುವೆ ನಿರ್ಮಾಣಕ್ಕೂ ಮುನ್ನ ಯಾವುದೇ ರೀತಿಯ ಅಭಿಪ್ರಾಯ, ಪ್ರತಿಕ್ರಿಯೆಗಳನ್ನು ಪಡೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕಾರ್ಯಕರ್ತ ವಿಜಯ್ ನಿಶಾಂತ್ ಮಾತನಾಡಿ, ಪ್ರತಿಕ್ರಿಯೆ ನೀಡಲು ಆನ್‌ಲೈನ್ ಆಯ್ಕೆ ಮಾತ್ರ ನಮ್ಮ ಮುಂದಿದೆ. ಆದರೆ, ಈ ರೀತಿಯ ಸಮಸ್ಯೆಯ ಬಗ್ಗೆ ದೈಹಿಕ ಸಮಾಲೋಚನೆ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಮಾತನಾಡಿ, ಯೋಜನೆ ವಿಳಂಬವಾದರೆ ನ್ಯಾಯಾಲಯದ ನಿಂದನೆಗೆ ಕಾರಣವಾಗುವುದರಿಂದ ರಸ್ತೆ ವಿಸ್ತರಣೆ ಸೇರಿದಂತೆ ಪಾಲಿಕೆಗೆ ಮುಂದಾಗಬೇಕಿದೆ. ಮರಗಳಿಗೆ ಸಂಬಂಧಿಸಿದಂತೆ ವೃಕ್ಷ ಸಮಿತಿಯ ನಿರ್ಧಾರಕ್ಕೆ ಬದ್ಧವಾಗಿದ್ದೇವೆಂದು ಹೇಳಿದ್ದಾರೆ.

SCROLL FOR NEXT