ರಾಜ್ಯ

ಹಾಸನ: ಬಿಜೆಪಿ ಕಾರ್ಯಕರ್ತನ ಸಾವಿನ ಹಿಂದೆ ರಾಜಕೀಯ ಪಿತೂರಿಯಿಲ್ಲ, ಕಳ್ಳ ಬೇಟೆಗಾರರ ​​ಗುಂಡಿಗೆ ಬಲಿಯಾಗಿದ್ದಾರೆ- ಪೊಲೀಸರು

Manjula VN

ಹಾಸನ: ಕಳ್ಳ ಬೇಟೆಗಾರರು ಹಾರಿಸಿದ ಗುಂಡಿಗೆ ಬಿಜೆಪಿ ಕಾರ್ಯಕರ್ತರೊಬ್ಬರು ಸಾವನ್ನಪ್ಪಿರುವ ಘಟನೆ ಸಕಲೇಶಪುರ ತಾಲೂಕಿನ ತಂಬಲಗೇರಿಯಲ್ಲಿ ಸೋಮವಾರ ಸಂಜೆ ನಡೆದಿದೆ.

ಮೃತ ವ್ಯಕ್ತಿಯನ್ನು ನವೀನ್ (39) ಎಂದು ಗುರ್ತಿಸಲಾಗಿದೆ. ಘಟನೆಯಲ್ಲಿ ನವೀನ್ ಎದೆಗೆ ಗುಂಡು ತಗುಲಿ ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಅವರ ಜೊತೆಗಿದ್ದ ಮತ್ತಿಬ್ಬರಿಗೂ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಹೇಮಾವತಿ ಜಲಾಶಯದ ಹಿನ್ನೀರಿನಲ್ಲಿ ದಯಾನಂದ ಮತ್ತು ಪದ್ಮನಾಭ ಎಂಬುವವರೊಂದಿಗೆ ನವೀನ್ ಮೀನುಗಾರಿಗೆ ನಡೆಸುತ್ತಿದ್ದರು. ಈ ವೇಳೆ ಹತ್ತು ಮಂದಿ ದುಷ್ಕರ್ಮಿಗಳು ಪ್ರಾಣಿಗಳನ್ನು ಬೇಟೆಯಾಡಲು ಗುಂಡು ಹಾರಿಸಿದ್ದಾರೆ. ಈ ಗುಂಡುಗಳು ಮೂವರಿಗೆ ಬಿದ್ದಿದೆ.

ಗುಂಡಿನ ಸದ್ದು ಕೇಳಿದ ಕೂಡಲೇ ಸ್ಥಳಕ್ಕೆ ಗ್ರಾಮಸ್ಥರು ಧಾವಿಸಿದ್ದು, ಗಾಯಾಳುಗಳನ್ನು ಸ್ಥಳೀಯ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ನವೀನ್ ಮೃತಪಟ್ಟಿದ್ದಾರೆ. ನವೀನ್ ಅವರು ಪತ್ನಿ ಹಾಗೂ ನಾಲ್ಕು ವರ್ಷದ ಮಗಳನ್ನು ಅಗಲಿದ್ದಾರೆ.

ಈ ನಡುವೆ ಶ್ವಾನದಳ ಹಾಗೂ ಮೈಸೂರಿನ ಎಫ್ಎಸ್ಎಲ್ ತಂಡ ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದೆ.

ಘಟನೆ ಹಿಂದೆ ರಾಜಕೀಯ ಪಿತೂರಿ ಅಥವಾ ವೈಯಕ್ತಿಕ ದ್ವೇಷವಿಲ್ಲ. ಕಳ್ಳ ಬೇಟೆಗಾರರು ಹಾರಿಸಿದ ಗುಂಡಿನಿಂದ ನವೀನ್ ಸಾವನ್ನಪ್ಪಿದ್ದಾರೆ ಎಂದು ಎಸ್ಪಿ ಹರಿರಾಮ್ ಶಂಕರ್ ಹೇಳಿದ್ದಾರೆ. ಈ ಸಂಬಂಧ ಸ್ಥಳದಿಂದ ದೂರ ನಿಂತಿದ್ದ ರಾಜಾಚಾರಿ ಎಂಬಾತನನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಪ್ರಕರಣ ಸಂಬಂಧ ಈಗಾಗಲೇ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ, ಇಬ್ಬರ ಪೈಕಿ ಒಬ್ಬ ಈ ಪ್ರದೇಶದಲ್ಲಿ ಇದೇ ರೀತಿಯ ಘಟನೆಯಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ.

SCROLL FOR NEXT