ರಾಜ್ಯ

ಮೆಟ್ರೋ ಪಿಲ್ಲರ್ ಕುಸಿತ ದುರಂತ; ಬಿಎಂಆರ್‌ಸಿಎಲ್ ಎಂಡಿ ಕಚೇರಿಗೆ ನುಗ್ಗಿ ಕರ್ನಾಟಕ ಸೇನೆ ಕಾರ್ಯಕರ್ತರ ಪ್ರತಿಭಟನೆ!

Manjula VN

ಬೆಂಗಳೂರು: ನಿರ್ಮಾಣ ಹಂತದಲ್ಲಿದ್ದ ಮೆಟ್ರೋ ಪಿಲ್ಲರ್‌ ಕುಸಿದು ಬಿದ್ದು ಮಹಿಳೆ ಹಾಗೂ ಆಕೆಯ ಮಗು ಸಾವನ್ನಪ್ಪಿದ  ಘಟನೆಯಿಂದ ಆಕ್ರೋಶಗೊಂಡ ಕರ್ನಾಟಕ ಸೇನೆ ಕಾರ್ಯಕರ್ತರು ಬಿಎಂಆರ್‌ಸಿಎಲ್ ಎಂಡಿ ಅಂಜುಮ್ ಪರ್ವೇಜ್ ಕಚೇರಿಗೆ ನುಗ್ಗಿ ಗುರುವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನಾಕಾರರ ಮನವಿ ಪತ್ರವನ್ನು ಕಚೇರಿಯಿಂದ ಹೊರಬಂದು ಅಧಿಕಾರಿಗಳು ಸ್ವೀಕರಿಸದಿದ್ದಕ್ಕೆ ರೊಚ್ಚಿಗೆದ್ದ ಕಾರ್ಯಕರ್ತರು, ಕಛೇರಿಗೆ ನುಗ್ಗಿ ಅಲ್ಲಿದ್ದ ಸೋಫಾ, ಚೇರ್‍ಗಳನ್ನು ಹೊರಗೆಳೆದು ಧ್ವಂಸಗೊಳಿಸಿದರು.

ಅಲ್ಲದೆ, ಮೆಟ್ರೋ ಕಾಮಗಾರಿ ದುರಂತದಲ್ಲಿ ಮೃತರಾದ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ಹಾಗೂ ಸರ್ಕಾರಿ ನೌಕರಿ ನೀಡುವಂತೆ ಒತ್ತಾಯಿಸಿದರು.

ಕರ್ನಾಟಕ ಸೇನೆ ಕಾರ್ಯಕರ್ತರು ಕಚೇರಿಗೆ ನುಗ್ಗಿದ ಘಟನೆಗೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಸಿಬ್ಬಂದಿಗಳು, ನೂರಾರು ಜನರು ಏಕಾಏಕಿ ಕಚೇರಿಗೆ ನುಗ್ಗಿ ದಾಂಧಲೆ ನಡೆಸುತ್ತಿರುವುದನ್ನು ಕಂಡು ಭಯಗೊಂಡಿದ್ದೇವೆಂದು ಹೇಳಿದ್ದಾರೆ.

ಕಾರ್ಯಕರ್ತರು ಬಿಎಂಆರ್‌ಸಿಎಲ್ ಎಂಡಿ ಕಚೇರಿಗೆ ನುಗ್ಗುತ್ತಿದ್ದಂತೆಯೇ ವಿಲ್ಸನ್ ಗಾರ್ಡನ್ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಸ್ಥಿತಿಯನ್ನು ತಿಳಿಸಿಗೊಳಿಸಿದರು.

ನಂತರ ಸ್ಥಳಕ್ಕೆ ಆಗಮಿಸಿದ ಅಂಜುಮ್ ಪರ್ವೇಜ್ ಅವರು ಕಾರ್ಯಕರ್ತರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದರು. ಈ ವೇಳೆ ಕಾರ್ಯಕರ್ತರು, ತಾಯಿ-ಮಗನ ಮೇಲೆ ನಿರ್ಮಾಣ ಹಂತದ ಪಿಲ್ಲರ್ ಬಿದ್ದ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಮತ್ತು ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿದರು. ಈ ವೇಳೆ ಅಂಜುಮ್ ಪರ್ವೇಜ್ ಅವರು ಪ್ರತಿಭಟನಾಕಾರರ ಒತ್ತಾಯವನ್ನು ಒಪ್ಪಿಕೊಂಡರು.

ಈ ವೇಳೆ ಕಾರ್ಯಕರ್ತರೊಬ್ಬರು ಮೆಟ್ರೋದಲ್ಲಿ ಕನ್ನಡಿಗರಿಗೆ ಉದ್ಯೋಗ ನಿರಾಕರಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಈ ಕುರಿತ ವಿಡಿಯೋವನ್ನು ಅಲ್ಲಿನ ಸಿಬ್ಬಂದಿ ಹಾಗೂ ಪೊಲೀಸರೊಂದಿಗೆ ಹಂಚಿಕೊಂಡರು. ವಿಡಿಯೋ ಬಗ್ಗೆ ಪ್ರತಿಕ್ರಿಯೆ ನೀಡಿದ ವಿಲ್ಸನ್ ಗಾರ್ಡನ್ ಪೊಲೀಸ್ ಅಧಿಕಾರಿಯೊಬ್ಬರು ವಿಡಿಯೋದಲ್ಲಿರುವ ವ್ಯಕ್ತಿಗಳ ಪತ್ತೆಹಚ್ಚುವುದಾಗಿ ಹೇಳಿದರು.

SCROLL FOR NEXT