ರಾಜ್ಯ

ಸ್ವಚ್ಛ ಭಾರತ್ ಮಿಷನ್ ಅರ್ಬನ್ 2.0: ನಗರದಲ್ಲಿ ಹೊಸದಾಗಿ 356 ಸಾರ್ವಜನಿಕ ಶೌಚಾಲಯಗಳ ನಿರ್ಮಿಸಲು ಬಿಬಿಎಂಪಿ ಮುಂದು!

Manjula VN

ಬೆಂಗಳೂರು: ಕೇಂದ್ರ ಸರ್ಕಾರದ 'ಸ್ವಚ್ಛ ಭಾರತ್ ಮಿಷನ್ ಅರ್ಬನ್ ಇನಿಶಿಯೇಟಿವ್ 2.0' ನ ಭಾಗವಾಗಿ ನಗರದಾದ್ಯಂತ 356 ಹೊಸ ಶೌಚಾಲಯಗಳ ನಿರ್ಮಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಂದಾಗಿದೆ.

ಉಪಕ್ರಮದ ಅಡಿಯಲ್ಲಿ, ಸಾರ್ವಜನಿಕರ ಪ್ರತಿಕ್ರಿಯೆ ಪಡೆದುಕೊಳ್ಳಲು ಆ್ಯಪ್ ವೊಂದನ್ನು ಪ್ರಾರಂಭಿಸುವಂತೆ ಅಧಿಕಾರಿಗಳಿಗೆ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ನಿರ್ದೇಶನ ನೀಡಿದೆ ಎಂದು ತಿಳಿದುಬಂದಿದೆ.

ಬಿಬಿಎಂಪಿಯ ಘನತ್ಯಾಜ್ಯ ನಿರ್ವಹಣೆಯ ಮುಖ್ಯ ಇಂಜಿನಿಯರ್ ಬಸವರಾಜ ಕಬಾಡೆ ಅವರು ಮಾತನಾಡಿ, “ನಗರ ನೈರ್ಮಲ್ಯ ಯೋಜನೆಯ ಪ್ರಕಾರ, ಪಾಲಿಕೆಯು 711 ಸಾರ್ವಜನಿಕ ಶೌಚಾಲಯಗಳ ಕೊರತೆಯನ್ನು ಎದುರಿಸುತ್ತಿದೆ. ಬಿಬಿಎಂಪಿಯು ಮೊದಲ ಹಂತದಲ್ಲಿ 356 ಶೌಚಾಲಯಗಳನ್ನು ನಿರ್ಮಿಸಲಿದೆ. 100 ‘ಶಿ’ ಶೌಚಾಲಯಗಳಿಗೆ ಹೊಸ ವಿವರವಾದ ಯೋಜನಾ ವರದಿಯನ್ನು ಸಿದ್ಧಪಡಿಸಲಾಗಿದ್ದು, ಈ ಪೈಕಿ 25 ಶೌಚಾಲಯಗಳನ್ನು ಸಾರ್ವಜನಿಕ-ಖಾಸಗಿ-ಪಾಲುದಾರಿಕೆ ಮಾದರಿಯಲ್ಲಿ ನಿರ್ಮಿಸಲಾಗುತ್ತದೆ. ಸಾರ್ವಜನಿಕರಿಗಾಗಿ 44 ಅತ್ಯಾಧುನಿಕ ಶೌಚಾಲಯಗಳಿಗೆ ಟೆಂಡರ್ ಆಹ್ವಾನಿಸಲಾಗಿದೆ. ಇದನ್ನು ಹೊರತುಪಡಿಸಿ 25 ಶೌಚಾಲಯಗಳು ನಿರ್ಮಾಣ ಹಂತದಲ್ಲಿವೆ ಎಂದು ಮಾಹಿತಿ ನೀಡಿದ್ದಾರೆ.

ಶೌಚಾಲಯಗಳಿಗೆ ಪ್ರೀಕಾಸ್ಟ್ ಸ್ಲ್ಯಾಬ್‌ಗಳನ್ನು ಹಾಕಲಾಗಿದೆ ಮತ್ತು ಗೋಡೆಗಳನ್ನು ನಿರ್ಮಿಸಲಾಗಿದೆ. ಕಾಮಗಾರಿಯನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

'SHE' ಶೌಚಾಲಯಗಳು ಮಗುವಿಗೆ ಹಾಲುಣಿಸಲು ಮತ್ತು ಬಟ್ಟೆ ಬದಲಾಯಿಸುವ ಸೌಕರ್ಯಗಳನ್ನು ಹೊಂದಿರುತ್ತದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ನಿರ್ವಹಣೆ ದೊಡ್ಡ ಸಮಸ್ಯೆಯಾಗಿರುವುದರಿಂದ, ಟೆಂಡರ್ ಷರತ್ತುಗಳ ಪ್ರಕಾರ, ಹೊಸ ಶೌಚಾಲಯಗಳನ್ನು ನಿರ್ಮಿಸುವ ಗುತ್ತಿಗೆದಾರರು ಅವುಗಳನ್ನು ಐದು ವರ್ಷಗಳವರೆಗೆ ನಿರ್ವಹಿಸಬೇಕಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

161 ಇ-ಶೌಚಾಲಯಗಳು ಮತ್ತು 15 ಮಾಡ್ಯುಲರ್ ಶೌಚಾಲಯಗಳು ಸೇರಿದಂತೆ ಪ್ರಸ್ತುತ 704 ಸಾರ್ವಜನಿಕ ಶೌಚಾಲಯಗಳಿಗೆ ಸಂಬಂಧಿಸಿದಂತೆ, ನಿರ್ವಹಣೆಯ ಜವಾಬ್ದಾರಿ ಗುತ್ತಿಗೆದಾರರ ಮೇಲಿದೆ. ಶೌಚಾಲಯಗಳು ಜಾರಿಗೆ ಬಂದ ನಂತರ, ರೇಟಿಂಗ್ ನಿಬಂಧನೆಯನ್ನು ಶೀಘ್ರವಾಗಿ ಪ್ರಾರಂಭಿಸಲಾಗುವುದು ಎಂದು ಕಬಾಡೆ ತಿಳಿಸಿದ್ದಾರೆ.

SCROLL FOR NEXT