ರಾಜ್ಯ

ಒಂದು ದೇಶ-ಒಂದು ಪೊಲೀಸ್ ಸಮವಸ್ತ್ರ: ಕೇಂದ್ರದ ಪ್ರಸ್ತಾವನೆಗೆ ರಾಜ್ಯ ಗೃಹ ಇಲಾಖೆ ಸಮ್ಮತಿ

Lingaraj Badiger

ಬೆಂಗಳೂರು: ದೇಶದ ಎಲ್ಲಾ ರಾಜ್ಯಗಳ ಪೊಲೀಸರಿಗೆ ಒಂದೇ ರೀತಿಯ ಸಮವಸ್ತ್ರ ಜಾರಿಗೆ ತರುವ ಸಂಬಂಧ ಕೇಂದ್ರ ಸರ್ಕಾರ ಕಳುಹಿಸಿದ್ದ ಒಂದು ದೇಶ, ಒಂದು ಸಮವಸ್ತ್ರ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ.

ಈ ಸಂಬಂಧ ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿಗೆ ಪತ್ರ ಬರೆದಿರುವ ರಾಜ್ಯ ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅವರು,  ಪ್ರಧಾನಿಯವರ ಸಲಹೆಯಂತೆ ದೇಶದ ಎಲ್ಲ ರಾಜ್ಯಗಳಲ್ಲೂ ಪೊಲೀಸರಿಗೆ ಒಂದೇ ರೀತಿಯ ಸಮವಸ್ತ್ರ ನಿಗದಿಪಡಿಸುವುದು ಅಗತ್ಯವಾಗಿದೆ. ಇದು ದೇಶದ ಕಾನೂನು ಅನುಷ್ಠಾನ ಸಂಸ್ಥೆಗಳ ಸಿಬ್ಬಂದಿಯ ಗುರುತಿನಲ್ಲಿ ಏಕತೆ ತರಲಿದೆ. ಒಂದು ಸಮವಸ್ತ್ರ ನೀತಿ ಜಾರಿಗೊಂಡ ದಿನದಿಂದಲೇ ಕರ್ನಾಟಕದಲ್ಲಿ ಅದನ್ನು ಅನುಷ್ಠಾನಕ್ಕೆ ತರಲಾಗುವುದು ಎಂದು ತಿಳಿಸಿದ್ದಾರೆ.

ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, ಪೊಲೀಸರಿಗೆ ದೇಶದಾದ್ಯಂತ ಒಂದೇ ಸಮವಸ್ತ್ರ ನೀತಿ ಜಾರಿಗೊಳಿಸುವ ಕುರಿತು ಕೇಂದ್ರ ಗೃಹ ಸಚಿವಾಲಯವು ರಾಜ್ಯ ಸರ್ಕಾರದ ಅಭಿ‍ಪ್ರಾಯ ಕೇಳಿತ್ತು. ಒಳಾಡಳಿತ ಇಲಾಖೆ ಸಲ್ಲಿಸಿದ್ದ ಪ್ರಸ್ತಾವಕ್ಕೆ ನಾನು ಸಮ್ಮತಿ ಸೂಚಿಸಿದ್ದು, ಅದರಂತೆ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ ಎಂದು ಹೇಳಿದ್ದಾರೆ.

ಇತ್ತೀಚೆಗೆ ಹರಿಯಾಣದಲ್ಲಿ ನಡೆದಿದ್ದ ಗೃಹ ಸಚಿವರ ಚಿಂತನ್ ಶಿಬಿರವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ದೇಶಾದ್ಯಂತ ಇರುವ ಪೊಲೀಸರ ಗುರುತು ಅನನ್ಯವಾಗಿರಬೇಕು ಎಂದು ಅಭಿಪ್ರಾಯಪಟ್ಟಿದ್ದರು. ಇದು ಒಂದು ‘ಪರಿಕಲ್ಪನೆ’ ಅಷ್ಟೇ ಆಗಿದ್ದು, ಹೇರಿಕೆ ಅಲ್ಲ ಎಂದು ಹೇಳಿದ್ದ ಪ್ರಧಾನಿ ನರೇಂದ್ರ ಮೋದಿ, ಇದೊಂದು ಸಲಹೆಯಾಗಿ ಪರಿಗಣಿಸುವಂತೆ ರಾಜ್ಯಗಳಿಗೆ ಸಲಹೆ ನೀಡಿದ್ದರು. ಅದರಂತೆ ದೇಶದ ಎಲ್ಲಾ ರಾಜ್ಯಗಳ ಪೊಲೀಸರಿಗೆ ಅನ್ವಯಗುವಂತಹ ಏಕರೂಪದ ಯೂನಿಫಾರ್ಮ್ ಪದ್ಧತಿ ಜಾರಿಗೆ ತರಲು ಕೇಂದ್ರ ಗೃಹ ಇಲಾಖೆ ರಾಜ್ಯ ಸರ್ಕಾರಗಳ ಅಭಿಪ್ರಾಯ ಕೇಳಿತ್ತು.

SCROLL FOR NEXT