ವೃದ್ಧ ಚಾಲಕನನ್ನು ಎಳೆದೊಯ್ದ ಸ್ಕೂಟರ್ ಚಾಲಕ ಸುಹೇಲ್, ಬಲಚಿತ್ರದಲ್ಲಿ ಆಸ್ಪತ್ರೆಯಲ್ಲಿ ಮುತ್ತಪ್ಪ 
ರಾಜ್ಯ

ಬೆಂಗಳೂರು: ನಡುರಸ್ತೆಯಲ್ಲಿ ವೃದ್ಧ ಚಾಲಕನನ್ನು ಸ್ಕೂಟರ್ ನಲ್ಲಿ ಎಳೆದೊಯ್ದ ಯುವಕ; ಪ್ರತ್ಯಕ್ಷದರ್ಶಿಗಳು ಹೇಳುವುದೇನು?

ನಗರದ ಮಾಗಡಿ ರಸ್ತೆ ಟೋಲ್​ಗೇಟ್​ ಬಳಿ ನಡೆದ ಹಿಟ್ ಆ್ಯಂಡ್ ರನ್ ಪ್ರಕರಣ ಸಂಬಂಧ ಬೈಕ್ ಸವಾರ ಸುಹೇಲ್ ಅಲಿಯಾಸ್ ಸಾಹಿಲ್ ಸಯ್ಯದ್​ನನ್ನು ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಇಂದು ಹೆಚ್ಚಿನ ವಿಚಾರಣೆಗೆ ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಸಾಧ್ಯತೆಯಿದೆ.

ಬೆಂಗಳೂರು: ನಗರದ ಮಾಗಡಿ ರಸ್ತೆ ಟೋಲ್​ಗೇಟ್​ ಬಳಿ ನಡೆದ ಹಿಟ್ ಆ್ಯಂಡ್ ರನ್ ಪ್ರಕರಣ ಸಂಬಂಧ ಬೈಕ್ ಸವಾರ ಸುಹೇಲ್ ಅಲಿಯಾಸ್ ಸಾಹಿಲ್ ಸಯ್ಯದ್​ನನ್ನು ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಇಂದು ಹೆಚ್ಚಿನ ವಿಚಾರಣೆಗೆ ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಸಾಧ್ಯತೆಯಿದೆ.

ನಿನ್ನೆ ಪೊಲೀಸರು ಈತನನ್ನು ವಿಚಾರಣೆ ನಡೆಸಿದಾಗ ಬೊಲೆರೊ ವಾಹನಕ್ಕೆ ಡಿಕ್ಕಿ ಹೊಡೆದಿರುವುದನ್ನು ಒಪ್ಪಿಕೊಂಡಿದ್ದಾರೆ. ಆದರೆ ನನ್ನ ತಪ್ಪಿಲ್ಲ, ನಾನು ರಾಂಗ್ ರೂಟ್​ನಲ್ಲಿ ಬಂದಿಲ್ಲ, ಜನರು ಥಳಿಸುತ್ತಾರೆ ಎಂಬ ಭಯದಿಂದ ಸ್ಕೂಟಿ ವೇಗವಾಗಿ ಓಡಿಸಿದ್ದೇನೆ ಎಂದು ಹೇಳಿದ್ದಾನೆ. 

ನಿನ್ನೆ ಪೊಲೀಸರು ಸುಹೇಲ್ ಮೇಲೆ ಎಫ್ಐಆರ್ ದಾಖಲಿಸಿ ತೀವ್ರ ವಿಚಾರಣೆ ನಡೆಸಿದಾಗ ಈ ಹಿಂದೆ ಯಾವುದೇ ಪ್ರಕರಣ, ಕೇಸು ಆತನ ವಿರುದ್ಧ ದಾಖಲಾಗಿಲ್ಲ ಎಂದು ತಿಳಿದುಬಂದಿದೆ. 

ಘಟನೆ ಬಗ್ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವೇಳೆ ಮಾತನಾಡಿದ ಗಾಯಾಳು ಬೊಲೆರೊ ಚಾಲಕ ಮುತ್ತಪ್ಪ ಶಿವಯೋಗಿ ಕಂಠಪ್ಪ (71), ಚಂದ್ರಾಲೇಔಟ್​ನ ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕೆ ತೆರಳುತ್ತಿದ್ದಾಗ ಬೊಲೆರೊಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾನೆ. ಕ್ಷೆಮೆಯೂ ಕೇಳದೆ ಪರಾರಿಯಾಗಲು ಯತ್ನಿಸಿದ ಹಿನ್ನಲೆ ಆತನನ್ನು ಹಿಡಿಯಲು ಮುಂದಾದೆ ಎಂದು ಹೇಳಿದ್ದಾರೆ. 

ಸುಹೇಲ್ ಹೇಳಿದ್ದೇನು?: ಪ್ರಕರಣದ ತನಿಖೆ ನಡೆಸುತ್ತಿರುವ ಗೋವಿಂದರಾಜನಗರ ಪೊಲೀಸರು, ಸುಹೇಲ್​ನನ್ನು ವಿಚಾರಣೆ ನಡೆಸುತ್ತಿದ್ದು, ವಾಹನಕ್ಕೆ ಡಿಕ್ಕಿ ಹೊಡೆದಿದ್ದು ನಿಜ, ನನ್ನ ಸ್ಕೂಟಿಗೂ ಡ್ಯಾಮೇಜ್ ಆಗಿದೆ. ನಾನು ಯಾವುದೇ ರಾಂಗ್ ರೂಟ್​​​ನಲ್ಲಿ ಬರಲಿಲ್ಲ ಎಂದಿದ್ದಾನೆ. ಅಲ್ಲದೆ, ಜನರು ಥಳಿಸುತ್ತಾರೆಂಬ ಭಯದಿಂದ ಬೈಕ್​ ತೆಗೆದುಕೊಂಡು ಹೋದೆ. ನಾನು ಬೈಕ್​ ಓಡಿಸುವಾಗ ಅವರು ಬಿಟ್ಟುಬಿಡ್ತಾರೆ ಅನ್ಕೊಂಡೆ. ಆದರೆ ಅವರು ಬಿಡಲಿಲ್ಲ. ವೇಗವಾಗಿ ಹೋದರೂ ಗಾಡಿಯನ್ನು ಹಿಡಿದುಕೊಂಡು ಬಂದುಬಿಟ್ಟರು. ನಾನು ಭಯದಿಂದ ಆ ರೀತಿ ಮಾಡಿದ್ದೇನೆ ಎಂದಿದ್ದಾನೆ. ನನ್ನನ್ನು ತಡೆದ ಜನರು ಹಲ್ಲೆ ಮಾಡಲು ಮುಂದಾದರು. ಮಾಗಡಿ ರಸ್ತೆಯಿಂದ ನಾಯಂಡಹಳ್ಳಿಯಲ್ಲಿರುವ ನನ್ನ ನಿವಾಸಕ್ಕೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರ ಮುಂದೆ ಸುಹೇಲ್ ಹೇಳಿಕೊಂಡಿದ್ದಾನೆ.

ಕಾರು ಚಾಲಕ ಮುತ್ತಪ್ಪ ಹೇಳುವುದೇನು?: ನಾನು ಮೂಲತಃ ವಿಜಯಪುರ ಜಿಲ್ಲೆಯವನು. 54 ವರ್ಷಗಳಿಂದ ಬೆಂಗಳೂರಿನ ಹೆಗ್ಗನಹಳ್ಳಿಯಲ್ಲಿ ನೆಲೆಸಿದ್ದೇನೆ. ಚಂದ್ರಾಲೇಔಟ್​ನ ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕೆ ತೆರಳುತ್ತಿದ್ದಾಗ ಮಧ್ಯಾಹ್ನ 1 ಗಂಟೆ ಸುಮಾರಿಗೆ ಹಿಂದಿನಿಂದ ಬಂದು ಬೊಲೆರೊಗೆ ಡಿಕ್ಕಿ ಹೊಡೆಸಿದ್ದಾನೆ. ಸ್ಥಳದಲ್ಲೇ ವಾಹನ ನಿಲ್ಲಿಸಿ ಕ್ಷಮೆಯಾಚಿಸಿದ್ದರೆ ಬಿಟ್ಟುಬಿಡುತ್ತಿದ್ದೆ. ಆದರೆ ಆತ ಯಾವುದೇ ಮಾತನಾಡದೆ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ ಎಂದರು.

ಕ್ಷಮೆ ಕೇಳದೆ ಪರಾರಿಯಾಗಲು ಯತ್ನಿಸಿದ ಹಿನ್ನಲೆ ಏನಾದರೂ ಸರಿ ಆತನನ್ನು ಬಿಡಬಾರದು ಎಂದು ನಿರ್ಧರಿಸಿ ದ್ವಿಚಕ್ರ ವಾಹನವನ್ನು ಹಿಡಿದುಕೊಂಡು ಜೋತುಬಿದ್ದೆ. ನನ್ನನ್ನು ಬೀಳಿಸಲು ಬಹಳಷ್ಟು ಯತ್ನಿಸಿದ. ಈ ವೇಳೆ ಜನರು ಬೆನ್ನತ್ತುತ್ತಿದ್ದಂತೆ ಸ್ಪೀಡ್​ ಹೆಚ್ಚಿಸಿದ್ದಾನೆ. ಆದರೂ ಸಾರ್ವಜನಿಕರು ಇವನನ್ನು ಅಡ್ಡಗಟ್ಟಿ ಹಿಡಿದು ನನ್ನನ್ನು ರಕ್ಷಿಸಿದರು. ಸಾರ್ವಜನಿಕರೇ ನನ್ನನ್ನು ಕರೆತಂದು ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಯಾವುದೇ ಕಾರಣಕ್ಕೂ ಪ್ರಕರಣವನ್ನು ಇಷ್ಟಕ್ಕೆ ಬಿಡುವ ಪ್ರಶ್ನೆಯೇ ಇಲ್ಲ. ದುರಹಂಕಾರಿ ದ್ವಿಚಕ್ರ ವಾಹನ ಸವಾರನಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಹೇಳಿದ್ದಾರೆ.

ಘಟನೆ ಬಗ್ಗೆ ಮಾತನಾಡಿದ ಪಶ್ಚಿಮ ವಿಭಾಗ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಬೊಲೆರೋ ವಾಹನಕ್ಕೆ ಬೈಕ್ ಡಿಕ್ಕಿಯಾಗಿದೆ. ನಂತರ ಇಬ್ಬರ ಮಧ್ಯೆ ಜಗಳವಾಗಿದೆ. ಆ ನಂತರ ಅವರು ಹಿಂದೆಯಿಂದ ಗಾಡಿಯನ್ನು ಹಿಡಿದುಕೊಂಡಿದ್ದಾರೆ. ಆದರೂ ಆ ಯುವಕ ಹಾಗೆಯೇ ಗಾಡಿ‌ ಚಲಾಯಿಸಿಕೊಂಡು ಬಂದಿದ್ದಾನೆ. ಈ ರೀತಿಯಾಗಿ ಘಟನೆ ನಡೆಯಬಾರದಿತ್ತು. ಘಟನೆ ಸಂಬಂಧ ತನಿಖೆ ಮಾಡುತ್ತೇವೆ. ಆನಂತರ ಯಾವ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಅಂತ ನೋಡುತ್ತೇವೆ ಎಂದಿದ್ದಾರೆ.

ಪ್ರತ್ಯಕ್ಷದರ್ಶಿಗಳು ಹೇಳುವುದೇನು?: ನಿಂತಿದ್ದ ಕಾರಿಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದಿದೆ. ಈ ವೇಳೆ ಕಾರು ಚಾಲಕ ಕಾರಿನಿಂದ ಇಳಿದು ಪ್ರಶ್ನಿಸುತ್ತಿದ್ದಾಗಲೇ ಬೈಕ್ ಸವಾರ ತಪ್ಪಿಸಲು ಯತ್ನಿಸಿದ್ದು, ಕಾರು ಚಾಲಕ ಬೈಕ್ ಹಿಂಬದಿ ಹಿಡಿದ್ದಿದ್ದಾರೆ. ನಾವು ಆತನನ್ನು ಹಿಡಿಯಲು ಮುಂದಾದೆವು. 70-80 ಕಿ.ಮೀ ವೇಗದಲ್ಲಿ ಸವಾರ ದ್ವಿಚಕ್ರ ವಾಹನವನ್ನು ಓಡಿಸಿದ್ದಾನೆ. ನಾವು ವೇಗವಾಗಿ ಚಲಾಯಿಸಿ ದ್ವಿಚಕ್ರ ವಾಹನವನ್ನು ಅಡ್ಡ ಹಾಕಿದೆವು. ನಾವು ಹಿಡಿಯಲು ಮುಂದಾದ ನಮಗೆ ಒದೆಯುವ ಯತ್ನ ಮಾಡಿದ್ದಾನೆ. ಈ ವೇಳೆ ಆಟೋ ಬಂದು ದ್ವಿಚಕ್ರ ವಾಹನಕ್ಕೆ ಅಡ್ಡ ನಿಂತಿತು.

ಬೊಲೆರೋ ಚಾಲಕ ವೃದ್ಧ ಮುತ್ತಪ್ಪಗೆ ಕೈ-ಕಾಲುಗಳಿಗೆ ಸಾಕಷ್ಟು ಗಾಯಗಳಾಗಿದೆ. ಈ ಘಟನೆ ನೋಡೋದಿಕ್ಕೆ ನಿಜಕ್ಕೂ ಬೆಚ್ಚಿಬೀಳಿಸುವಂತಿದೆ ಎನ್ನುತ್ತಾರೆ ಪ್ರತ್ಯಕ್ಷದರ್ಶಿಗಳು. 

ಘಟನೆಯಲ್ಲಿ ಮುತ್ತಪ್ಪ ಅವರ ಕೈ, ಕಾಲು ಮಂಡಿ, ಸೊಂಟದ ಕೆಳಗಿನ ಭಾಗ ಕಿತ್ತು ಹೋಗಿದೆ. ಒಂದು ಕಿಮೀ ದೂರ ಸಾಹಿಲ್ ಎಳೆದೊಯ್ದಿದ್ದ. ಈ ವೇಳೆ ಹೊಸ ಪ್ಯಾಂಟ್ ಹರಿದು ಹೋಗಿದೆ. ಕೈ ಕಾಲು ಎಲ್ಲಾ ಕಡೆ ಗಾಯಗಳಾಗಿವೆ. ಈಗ ಕುಟುಂಬದವರು ಕ್ಷಮೆ ಕೇಳುತ್ತಿದ್ದಾರೆ ಎಂದು ಹೇಳಿದರು.

ಆಸ್ಪತ್ರೆಗೆ ಭೇಟಿ ನೀಡಿದ ಸಚಿವ ಸೋಮಣ್ಣ: ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮುತ್ತಪ್ಪ ಅವರ ಆರೋಗ್ಯ ವಿಚಾರಿಸಲು ಸಚಿವ ಸೋಮಣ್ಣ ಆಸ್ಪತ್ರೆಗೆ ಭೇಟಿ ನೀಡಿದರು. ಆರೋಪಿ ದ್ವಿಚಕ್ರ ವಾಹನದ ಸವಾರನ ವಿರುದ್ಧ ಕಾನೂನು ಪ್ರಕಾರ ಕ್ರಮ ಆಗಲಿದೆ. ಗಾಯಾಳು ಮುತ್ತಪ್ಪಗೆ ವೈದ್ಯರು ಎಕ್ಸ್‌ರೇ ತೆಗೆದಿದ್ದಾರೆ ಎಂದರು. ಅಲ್ಲದೆ, ಆರೋಪಿ ಚಾಲಕ ಉದ್ಧಟತನ ಮೆರೆದಿದ್ದಾನೆ. ವೃದ್ಧನನ್ನು ಎಳೆದೊಯ್ದಿದ್ದು ತಪ್ಪು. ಮುತ್ತಪ್ಪರ ಚಿಕಿತ್ಸಾ ವೆಚ್ಚವನ್ನು ರಾಜ್ಯ ಸರ್ಕಾರದಿಂದ ಕೊಡಿಸುವೆ ಎಂದು ಭರವಸೆ ನೀಡಿದ್ದಾರೆ.

70 ವರ್ಷದ ವೃದ್ಧ ಮುತ್ತಪ್ಪ ಅವರು ಸ್ಕೂಟಿಯ ಹಿಂದೆ ಹಿಡಿದುಕೊಂಡು ಹೋಗಿದ್ದಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದರೆ ಇನ್ನು ಕೆಲವರು ಈ ಇಳಿವಯಸ್ಸಿನಲ್ಲಿ ಅಷ್ಟೊಂದು ಹಠ ಬೇಕಿತ್ತೇ, ಏನಾದರೂ ಜೀವಕ್ಕೆ ಹೆಚ್ಚುಕಡಿಮೆ ಆಗುತ್ತಿದ್ದರೆ ಅಪಾಯವಾಗುತ್ತಿದ್ದರೆ ಏನು ಗತಿ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

SCROLL FOR NEXT