ರಾಜ್ಯ

ಐದು ವರ್ಷಗಳಲ್ಲಿ 14 ತಹಶೀಲ್ದಾರ್‌ಗಳನ್ನು ಕಂಡ ಶಿವಮೊಗ್ಗದ ಸೊರಬ ತಾಲೂಕು, ಅಭಿವೃದ್ಧಿ ಕುಂಠಿತ

Ramyashree GN

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ 14ನೇ ತಹಶೀಲ್ದಾರ್ ಡಾ. ಮೋಹನ್ ಭಸ್ಮೆ ಅವರನ್ನು ಧಾರವಾಡಕ್ಕೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಇತ್ತೀಚೆಗೆ ಹೊರಡಿಸಿರುವ ಆದೇಶ ತಾಲೂಕಿನಲ್ಲಿ ಮತ್ತೊಮ್ಮೆ ನಿರ್ವಾತ ಸೃಷ್ಟಿಸಿದೆ. ಈ ಕ್ರಮದಿಂದ ಸೊರಬ ತಾಲೂಕಿನಲ್ಲಿ ಕಳೆದ ನಾಲ್ಕೂವರೆ ವರ್ಷದಲ್ಲಿ 14 ತಹಶೀಲ್ದಾರರು ಬದಲಾವಣೆ ಕಂಡಿದ್ದಾರೆ.

ಫಲಿತಾಂಶವಾಗಿ ತಾಲ್ಲೂಕಿನಲ್ಲಿ ಅಭಿವೃದ್ಧಿ ಕಾಮಗಾರಿ ಕುಂಠಿತಗೊಂಡಿದೆ. ಸೊರಬ ತಾಲೂಕನ್ನು ಜಿಲ್ಲೆಯ ಅತ್ಯಂತ ಹಿಂದುಳಿದ ತಾಲೂಕುಗಳಲ್ಲಿ ಒಂದೆಂದು ಪರಿಗಣಿಸಿರುವುದು ವಿಪರ್ಯಾಸ.

ಡಾ. ಡಿ.ಎಂ.ನಂಜುಂಡಪ್ಪ ವರದಿಯಲ್ಲಿ ಕೂಡ ಹಿಂದುಳಿದ ತಾಲೂಕು ಎಂದು ಹೇಳಲಾಗಿದೆ. ತಾಲೂಕು ಆಡಳಿತದ ಜವಾಬ್ದಾರಿ ತಹಶೀಲ್ದಾರ್ ಕಚೇರಿಗೆ ಇದೆ. ಭೂ ವ್ಯಾಜ್ಯಗಳ ಪರಿಹಾರ, ದೇವಸ್ಥಾನಗಳ ಆಸ್ತಿ ಸಂರಕ್ಷಣೆ, ಮತದಾರರ ಪಟ್ಟಿ ಪರಿಷ್ಕರಣೆ, ಪ್ರವಾಹ ಪರಿಹಾರ, ಆದಾಯ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ನಿವೇಶನ ವಿತರಣೆ ಹಾಗೂ ವಿವಿಧ ಯೋಜನೆಗಳಡಿ ಮನೆ ಹಂಚಿಕೆ, ಭೂ ಅಭಿವೃದ್ಧಿ ಅರ್ಜಿಗಳು ಹಾಗೂ ವಿಲೇವಾರಿ ಮತ್ತು ಇತರ ಆದಾಯದ ಕೆಲಸ ಮುಂತಾದ ವಿವಿಧ ಅಗತ್ಯಗಳಿಗಾಗಿ ಜನರು ತಹಶೀಲ್ದಾರ್ ಕಚೇರಿಗೆ ಭೇಟಿ ನೀಡುತ್ತಾರೆ. 

ಸರಾಸರಿಯಾಗಿ, 56 ತಿಂಗಳ ಅವಧಿಯಲ್ಲಿ 14 ವಿವಿಧ ತಹಶೀಲ್ದಾರ್‌ಗಳು ಬದಲಾಗಿದ್ದು, ಪ್ರತಿಯೊಬ್ಬರಿಗೂ ಸೇವೆ ಸಲ್ಲಿಸಲು ಕೇವಲ ನಾಲ್ಕು ತಿಂಗಳು ಮಾತ್ರ ಸಿಕ್ಕಿದೆ. ಇಲ್ಲಿಗೆ ಬಂದ ಯಾವುದೇ ಹೊಸ ತಹಶೀಲ್ದಾರ್ ಇಲ್ಲಿನ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವ ಮುನ್ನವೇ ಅವರ ವರ್ಗಾವಣೆಯಾಗಿರುತ್ತದೆ. ಕಾರಣ ಕೇಳಿದರೆ, ಸ್ಥಳೀಯ ಬಿಜೆಪಿ ಮುಖಂಡರು ಪಕ್ಷದ ಶಾಸಕ ಕುಮಾರ್ ಬಂಗಾರಪ್ಪ ಅವರೇ ಈ ವರ್ಗಾವಣೆಯ ಮೇಲೆ ಅನಾವಶ್ಯಕವಾಗಿ ಪ್ರಭಾವ ಬೀರುತ್ತಾರೆ ಎಂದು ಆರೋಪಿಸಿದ್ದಾರೆ.

ಆದರೆ, ತಹಶೀಲ್ದಾರ್‌ಗಳನ್ನು ವರ್ಗಾವಣೆ ಮಾಡುವ ಅಧಿಕಾರ ಮುಖ್ಯಮಂತ್ರಿಗೆ ಇದೆ ಎಂದು ಬಂಗಾರಪ್ಪ ಆರೋಪವನ್ನು ತಳ್ಳಿಹಾಕಿದ್ದಾರೆ. ಆದರೆ ತಾಲೂಕಿನ ಜನತೆ ಅವರ ಈ ಹೇಳಿಕೆಯನ್ನು ನಿರಾಕರಿಸುತ್ತಾರೆ. ಹಾಲಿ ಶಾಸಕರ ಸಲಹೆ ಪಡೆಯದೆ ಸಿಎಂ ತಹಶೀಲ್ದಾರ್‌ರನ್ನು ವರ್ಗಾವಣೆ ಮಾಡುವುದು ಹೇಗೆ ಎಂದು ಪ್ರಶ್ನಿಸುತ್ತಾರೆ. ಇಷ್ಟೆಲ್ಲ ಆರೋಪ, ಪ್ರತ್ಯಾರೋಪಗಳ ನಡುವೆ ಸೊರಬ ತಾಲೂಕಿನ ಅಭಿವೃದ್ಧಿಗೆ ಹೊಡೆತ ಬೀಳುತ್ತಿದೆ.

SCROLL FOR NEXT