ರಾಜ್ಯ

ಮಲ್ಲೇಶ್ವರಂ ಬಾಂಬ್ ಸ್ಫೋಟ ಪ್ರಕರಣ; ವಿಚಾರಣಾಧೀನ ಕೈದಿ ಮೇಲೆ ಸಹ ಕೈದಿಗಳಿಂದ ಹಲ್ಲೆ

Manjula VN

ಬೆಂಗಳೂರು: ಮಲ್ಲೇಶ್ವರಂ ಸ್ಫೋಟದ ಆರೋಪಿ ಮತ್ತು ವಿಚಾರಣಾಧೀನ ಕೈದಿ (ಯುಟಿಪಿ) ತಮಿಳುನಾಡು ಮೂಲದ ಸೈಯದ್ ಅಲಿ (35) ಎಂಬಾತನ ಮೇಲೆ ಐವರು ಸಹ ಕೈದಿಗಳು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ.

ಆರೋಪಿ ನ್ಯಾಯಾಲಯದ ಮುಂದೆ ತಪ್ಪೊಪ್ಪಿಕೊಳ್ಳಲು ನಿರ್ಧರಿಸಿದ ಹಿನ್ನೆಲೆಯಲ್ಲಿ ಸಹ ಕೈದಿಗಳು ಹಲ್ಲೆ ನಡೆಸಿದ್ದಾರೆಂದು ತಿಳಿದುಬಂದಿದೆ.

ಪ್ರಕರಣದಲ್ಲಿ ಅಪರಾಧ ಪ್ರಕ್ರಿಯಾ ಸಂಹಿತೆಯ (CrPC) ಸೆಕ್ಷನ್ 229 ರ ಅಡಿಯಲ್ಲಿ ತಪ್ಪೊಪ್ಪಿಕೊಳ್ಳಲು ಅಲಿ ಅವರು ತಮ್ಮ ವಕೀಲರ ಮೂಲಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ವಿಚಾರ ತಿಳಿದ ಸಹ ಕೈದಿಗಳು ಅಲಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.

ಡಿಸೆಂಬರ್ 16 ರಂದು ವಿಚಾರಣಾಧಿನ ಕೈದಿಗಳಾದ ಕಿಚನ್‌ ಬುಹಾರಿ, ಜುಲ್ಫಿಕರ್‌ ಅಲಿ, ಶಿಯಾವುದ್ದೀನ್‌, ಸಜಾ ಕೈದಿಗಳಾದ ಅಹಮ್ಮದ್‌ ಬಾವಾ ಅಬೂಬಕರ್‌, ಬಿಲಾಲ್‌ ಅಹ್ಮದ್‌ ಕ್ಯುಟಾ ಹಲ್ಲೆ ನಡೆಸಿದ್ದು, ತನಗೆ ಜೀವ ಬೆದರಿಕೆ ಹಾಕಿದ್ದಾರೆಂದು ಅಲಿ ಜೈಲಿನ ಅಧಿಕಾರಿಗಳಿಗೆ ದೂರು ನೀಡಿದ್ದು, ಇದೀಗ ಶಂಕಿತ ಉಗ್ರ ಸಯ್ಯದ್‌ ಅಲಿಯನ್ನು ಪ್ರತ್ಯೇಕ ಸೆಲ್‌ಗೆ ಸ್ಥಳಾಂತರಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ಘಟನೆ ಸಂಬಂಧ ಜನವರಿ 25 ರಂದು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಹಲ್ಲೆ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.

ಏಪ್ರಿಲ್ 17, 2013 ರಂದು, ವಿಧಾನಸಭೆ ಚುನಾವಣೆಗೂ ಮುನ್ನ ಮಲ್ಲೇಶ್ವರಂನ ಕರ್ನಾಟಕ ಬಿಜೆಪಿ ಕಚೇರಿ ಬಳಿ ಬಾಂಬ್ ಸ್ಫೋಟಗೊಂಡಿತ್ತು. ಘಟನೆಯಲ್ಲಿ 11 ಪೊಲೀಸರು ಸೇರಿದಂತೆ ಕನಿಷ್ಠ 16 ಜನರು ಗಾಯಗೊಂಡಿದ್ದರು. ವ್ಯಾನ್ ಮತ್ತು ಕಾರಿನ ನಡುವೆ ನಿಲ್ಲಿಸಿದ್ದ ಮೋಟಾರ್ ಸೈಕಲ್‌ನಲ್ಲಿ ಬಾಂಬ್ ಇಡಲಾಗಿತ್ತು.

ನಿಷೇಧಿತ ಭಯೋತ್ಪಾದಕ ಸಂಘಟನೆ ಅಲ್ ಉಮ್ಮಾ ಜೊತೆಗೆ ಕೈಜೋಡಿಸಿರುವ ತಮಿಳುನಾಡಿನ 20 ಕ್ಕೂ ಹೆಚ್ಚು ಜನರು ಮಲ್ಲೇಶ್ವರಂ ಸ್ಫೋಟ ಪ್ರಕರಣದಲ್ಲಿ ಆರೋಪಿಗಳಾಗಿದ್ದು, ವಿಚಾರಣೆ ಎದುರಿಸುತ್ತಿದ್ದಾರೆ.

SCROLL FOR NEXT