ರಾಜ್ಯ

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಜೆಪಿ ನಡ್ಡಾ ವಿರುದ್ಧದ ತನಿಖೆಗೆ ಕರ್ನಾಟಕ ಹೈಕೋರ್ಟ್ ತಡೆ

Ramyashree GN

ಬೆಂಗಳೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ವಿರುದ್ಧ ದಾಖಲಾಗಿದ್ದ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದ ತನಿಖೆಗೆ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

2023ರ ಮೇ ತಿಂಗಳಿನಲ್ಲಿ ವಿಜಯನಗರದ ಹರಪನಹಳ್ಳಿ ಪಟ್ಟಣದಲ್ಲಿ ಪಕ್ಷದ ಪರ ಪ್ರಚಾರ ನಡೆಸುವ ವೇಳೆ ನಡ್ಡಾ ಅವರು ಮತದಾರರಿಗೆ ಆಮಿಷ ಒಡ್ಡಿದರು ಎಂದು ಆರೋಪಿಸಲಾಗಿತ್ತು.

ತಮ್ಮ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸುವಂತೆ ನಡ್ಡಾ ಅವರು ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ಶುಕ್ರವಾರ ತನಿಖೆಗೆ ತಡೆ ನೀಡಿ ಮಧ್ಯಂತರ ಆದೇಶ ಹೊರಡಿಸಿದೆ. ಅಲ್ಲದೆ, ಮುಂದಿನ ವಿಚಾರಣೆಯನ್ನು ಜೂನ್ 21ಕ್ಕೆ ಮುಂದೂಡಿದೆ.

ಮತದಾರರಿಗೆ ಆಮಿಷ ಒಡ್ಡುವ ಹಾಗೂ ಬೆದರಿಕೆ ಹಾಕುವ ರೀತಿಯಲ್ಲಿ ಭಾಷಣ ಮಾಡಲಾಗಿದೆ ಎಂದು ಚುನಾವಣಾ ಜಾಗೃತ ವಿಭಾಗದ ಅಧಿಕಾರಿಗಳು ಹರಪ್ಪನಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೆ, ಮಾದರಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಹೇಳಲಾಗಿದೆ.

ನಡ್ಡಾ ಅವರು ಈ ತನಿಖೆಯನ್ನು ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

SCROLL FOR NEXT