ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ಕುಡಿಯುವ ನೀರು ತುರ್ತು ನಿರ್ವಹಣೆಗಾಗಿ 1 ಕೋಟಿ ರೂ. ಅನುದಾನ: ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ ಜಿಲ್ಲೆಯ ಕೆಲವು ಭಾಗಗಳಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ಆಗಿರುವ ಸಮಸ್ಯೆ ಸರಿಪಡಿಸಲು 1 ಕೋಟಿ ರೂ. ಅನುದಾನವನ್ನು ತುರ್ತು ನಿರ್ವಹಣೆಗಾಗಿ ಮಂಜೂರು ಮಾಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ, ಮಾಹಿತಿ ತಂತ್ರಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಶುಕ್ರವಾರ ಹೇಳಿದರು.

ಸಚಿವ ಪ್ರಿಯಾಂಕ್ ಖರ್ಗೆ
Manjula VN
Updated On : 8 Jul 2023, 5:52 pm

ಕಲಬುರಗಿ: ಜಿಲ್ಲೆಯಲ್ಲಿ ಕಳೆದ ವಾರದಿಂದ ಮಳೆ ಆಗುತ್ತಿದ್ದು, ಕುಡಿಯುವ ನೀರು ಸರಬರಾಜಿನಲ್ಲಿ ಆಗಿದ್ದ ಸಮಸ್ಯೆಗಳು ಸುಧಾರಣೆಯಾಗುತ್ತಿದೆ. ಆದಾಗ್ಯೂ ಜಿಲ್ಲೆಯ ಕೆಲವು ಭಾಗಗಳಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ಆಗಿರುವ ಸಮಸ್ಯೆ ಸರಿಪಡಿಸಲು 1 ಕೋಟಿ ರೂ. ಅನುದಾನವನ್ನು ತುರ್ತು ನಿರ್ವಹಣೆಗಾಗಿ ಮಂಜೂರು ಮಾಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ, ಮಾಹಿತಿ ತಂತ್ರಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಶುಕ್ರವಾರ ಹೇಳಿದರು.

ಈ‌ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಜಿಲ್ಲೆಯ ಯಡ್ರಾಮಿ ಹಾಗೂ ಜೇವರ್ಗಿ ತಾಲ್ಲೂಕುಗಳ ತಲಾ ಒಂದೊಂದು ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಮುಂಬರುವ ವಾರಗಳಲ್ಲಿ ಕಡಿಮೆ ಮಳೆಯಿಂದ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಬಹುದಾದ ಗ್ರಾಮಗಳನ್ನು ಮೌಲ್ಯಮಾಪನ ಮಾಡಲಾಗಿದ್ದು, ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಪ್ರಸ್ತುತ 130 ಕಾಮಗಾರಿಗಳಿಗೆ ಸಂಬಂಧಿಸಿದಂತೆ ರೂ 260 ಲಕ್ಷಗಳ ಪ್ರಸ್ತಾವನೆಯನ್ನು ಸಿದ್ಧಪಡಿಸಲಾಗಿದೆ ಎಂದು ಹೇಳಿದರು.

ಚರಂಡಿ ನೀರು ಅಥವಾ ಮಳೆನೀರು ಸೇರುವುದರಿಂದ ಕಲಬುರಗಿ ಜಿಲ್ಲೆಯಲ್ಲಿ 1828 ಕೊಳವೆಬಾವಿಗಳು ಹಾಗೂ ಕೈಪಂಪುಗಳು ಮಾಲಿನ್ಯಕ್ಕೆ ಗುರಿಯಾಗಿವೆ. ಇಂತಹ ಕೊಳವೆ ಬಾವಿಗಳನ್ನು ಮಾಲಿನ್ಯದಿಂದ ರಕ್ಷಿಸುವ ಸಲುವಾಗಿ ಕೊಳವೆಬಾವಿ ಸುತ್ತಲೂ ರಕ್ಷಣಾತ್ಮಕ ಕಾಂಕ್ರೀಟ್ ರಿಂಗ್ ಅಳವಡಿಸಲು ಉದ್ದೇಶಿಸಲಾಗಿದ್ದು ಇದಕ್ಕಾಗಿ 135.20 ಲಕ್ಷ ರೂ. ವೆಚ್ಚವಾಗಲಿದೆ.

Advertisement

Advertisement

ಗ್ರಾಮೀಣ ಪ್ರದೇಶಗಳಿಗೆ ನೀರು ಸರಬರಾಜು ಮಾಡಲು ಖಾಸಗಿಯಾಗಿ ಬಾಡಿಗೆಗೆ ಪಡೆಯಾಗಿರುವ ಕೊಳವೆಬಾವಿ ಹಾಗೂ ಟ್ಯಾಂಕರ್‌ಗಳ ಬಾಡಿಗೆ ಶುಲ್ಕದ ಬಿಲ್‌ಗಳನ್ನು ಪಾವತಿಸಲು ಗ್ರಾಮಪಂಚಾಯ್ತಿಗಳಿಗೆ ಅನುದಾನದ ಕೊರತೆಯಿದ್ದು, ಈ ವೆಚ್ಚವನ್ನು ಭರಿಸಲು 20 ಲಕ್ಷ ರೂ. ಮಂಜೂರು ಮಾಡಲಾಗುವುದು. ಮೇ-ಜೂನ್‌ ತಿಂಗಳುಗಳಲ್ಲಿ 7 ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಕಲ್ಯಾಣ ಕರ್ನಾಟಕ ಸಮಗ್ರ ಅಭಿವೃದ್ಧಿಗೆ 5,000 ಕೋಟಿ ರೂ. ಮೀಸಲು: ಸಿಎಂ ಸಿದ್ದರಾಮಯ್ಯ

ಜಿಲ್ಲೆಯಲ್ಲಿ 200 ಶುದ್ಧ ನೀರಿನ ಘಟಕಗಳು ದುರಸ್ತಿಗೆ ಒಳಗಾಗಿದ್ದು, ಇವುಗಳನ್ನು ಸರಿಪಡಿಸಿ ನೀರು ಸರಬರಾಜು ಮಾಡಲು ಕಾರ್ಯಯೋಜನೆ ಸಿದ್ಧಪಡಿಸಲು ಸೂಚಿಸಲಾಗಿದೆ. ಕೊಳವೆಬಾವಿ ಹಾಗೂ ತೆರೆದ ಬಾವಿಗಳಲ್ಲಿ ಅಂತರ್ಜಲ ಕಲುಷಿತಗೊಳ್ಳದಂತೆ ಸ್ವಚ್ಛತಾ ಅಭಿಯಾನ ಕೈಗೊಂಡು ಸುತ್ತಮುತ್ತಲ ಪ್ರದೇಶಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಲಾಗುತ್ತಿದೆ.

ಜಿಇ/ಕಾಲರಾ ಪ್ರಕರಣಗಳಿಗೆ ಸಂಬಂಧಿಸಿದಂತೆ ಹಿಂದಿನ ಐದು ವರ್ಷಗಳ ಕಣ್ಗಾವಲು ಮಾಹಿತಿಯನ್ನು ಆಧರಿಸಿ 49 ಗ್ರಾಮಗಳನ್ನು ಗುರುತಿಸಿಲಾಗಿದೆ. ಕುಡಿಯುವ ನೀರು ಸರಬರಾಜಿನಲ್ಲಿ ಯಾವುದೇ ರೀತಿಯ ಮಾಲಿನ್ಯವನ್ನು ತಪ್ಪಿಸಲು ನೀರಿನ ಪರೀಕ್ಷೆ, ಸಂಭವನೀಯ ಜಿಇ ಪ್ರಕರಣಗಳನ್ನು ಗುರುತಿಸಲು ಆಶಾ ಕಾರ್ಯಕರ್ತರ ಮೂಲಕ ಸಮೀಕ್ಷೆ, ನೀರಿನ ಜಾಲದ ವಿವರವಾದ ಲೆಕ್ಕಪರಿಶೋಧನೆಗಾಗಿ ಅಭಿಯಾನವನ್ನು ತೀವ್ರಗೊಳಿಸಿದ್ದೇವೆ. ಗ್ರಾಮಪಂಚಾಯತಿಗಳು ಮಾರ್ಗಸೂಚಿಯನ್ವಯ ನೀರಿನ ಕ್ಲೋರಿನೇಷನ್ ಮಾಡುತ್ತಿದ್ದಾರೆ, ಹಾಗೂ ಸಿಬ್ಬಂದಿಗೆ ಇತ್ತೀಚೆಗೆ ತರಬೇತಿ ನೀಡಲಾಗಿದೆ.

ನೀರು ಸರಬರಾಜು ಹಾಗೂ ನೀರಿನ ಗುಣಮಟ್ಟಕ್ಕೆ ಸಂಬಂಧಿಸಿದ ದೂರುಗಳನ್ನು ಪರಿಹರಿಸಲು ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ದೂರು ಪರಿಹಾರ ಕೋಶವನ್ನು ಸ್ಥಾಪಿಸಲಾಗಿದೆ ಎಂದೂ ಸಚಿವರು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement