ರಾಜ್ಯ

ಡಿಸೆಂಬರ್ ಒಳಗೆ 400 ಪಶುವೈದ್ಯರ ನೇಮಕ: ಸಚಿವ ಕೆ.ವೆಂಕಟೇಶ್

Manjula VN

ಬೆಂಗಳೂರು: ಪಶು ಸಂಗೋಪನಾ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದ್ದು, ಎರಡು ತಿಂಗಳಲ್ಲಿ 200 ಪಶು ವೈದ್ಯಕೀಯ ನಿರೀಕ್ಷಕರು, ವರ್ಷಾಂತ್ಯದ ವೇಳೆಗೆ 400 ಪಶು ವೈದ್ಯರ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಪಶು ಸಂಗೋಪನಾ ಸಚಿವ ವೆಂಕಟೇಶ್ ಅವರು ಸೋಮವಾರ ಹೇಳಿದರು.

ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಪಶು ಸಂಗೋಪನಾ ಇಲಾಖೆಯಲ್ಲಿ ಪಶು ವೈದ್ಯರು, ಪಶು ವೈದ್ಯಕೀಯ ನಿರೀಕ್ಷಕರ ಕೊರತೆ ಇದೆ. ಇದನ್ನು ಸರಿಪಡಿಸಲು ಇನ್ನೆರಡು ತಿಂಗಳಲ್ಲಿ ಪಶು ವೈದ್ಯಕೀಯ ನಿರೀಕ್ಷಕರ ಮತ್ತು ಡಿಸೆಂಬರ್ ವೇಳೆಗೆ 400 ಪಶು ವೈದ್ಯರನ್ನು ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.

ವಿವಿಧ ಜಿಲ್ಲೆಗಳಲ್ಲಿ ಹೆಚ್ಚುವರಿಯಾಗಿರುವ ಹೊಸ ವೈದ್ಯರು ಮತ್ತು ಪಶು ವೈದ್ಯಕೀಯ ನಿರೀಕ್ಷಕರನ್ನು ವರ್ಗಾವಣೆ ಮಾಡಲು ಕ್ರಮ ಕೈಗೊಳ್ಳಲಾಗುವುದು. 30 ಹೊಸ ಪಶು ವೈದ್ಯಕೀಯ ಆಸ್ಪತ್ರೆಗಳ ಮಂಜೂರಾತಿಗೆ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದು, ಅಗತ್ಯವಿರುವಡೆ ಹೊಸ ಆಸ್ಪತ್ರೆ ಆರಂಭಿಸಲಾಗುವುದು ಎಂದು ತಿಳಿಸದರು.

ಇದೇ ವೇಳೆ ಸಭಾಧ್ಯಕ್ಷ ಯು ಟಿ ಖಾದರ್ ಮಾತನಾಡಿ, ಪ್ರಾಣಿಗಳಿಗೂ ಬದುಕುವ ಹಕ್ಕಿದೆ. ಪಶು ವೈದ್ಯರ ಕೊರತೆ ರಾಜ್ಯವ್ಯಾಪಿ ಸಮಸ್ಯೆಯಾಗಿದ್ದು, ಸರಕಾರ ಇದನ್ನು ಪರಿಹರಿಸಬೇಕೆಂದು ಒತ್ತಾಯಿಸಿದರು.

SCROLL FOR NEXT