ರಾಜ್ಯ

ಜೈನಮುನಿ ಹತ್ಯೆ ಖಂಡಿಸಿ ರಾಜಭವನಕ್ಕೆ ಇಂದು ಬಿಜೆಪಿ ನಾಯಕರ ಮೆರವಣಿಗೆ: ರಾಹುಲ್ ಗಾಂಧಿ ಅನರ್ಹತೆ ಪ್ರಶ್ನಿಸಿ ಕಾಂಗ್ರೆಸ್ ಮೌನ ಪ್ರತಿಭಟನೆ

Sumana Upadhyaya

ಬೆಂಗಳೂರು: ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ನಂದಿಪರ್ವತ ಆಶ್ರಮದ ಜೈನಮುನಿ ಕಾಮಕುಮಾರ ನಂದಿ ಮಹಾರಾಜರನ್ನು ಬರ್ಬರ ಹತ್ಯೆ ಮಾಡಲಾಗಿದ್ದರೆ, ಮತ್ತೊಂದೆಡೆ ಮೈಸೂರು ಜಿಲ್ಲೆ ಟಿ. ನರಸೀಪುರದಲ್ಲಿ ನಡೆದ ಹನುಮ ಜಯಂತಿಯ ಸಂದರ್ಭದಲ್ಲಿ ಆದ ಕ್ಷುಲ್ಲಕ ವಿಚಾರದ ಗಲಾಟೆಯಲ್ಲಿ ಯುವಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್​ ಕೊಲೆ ನಡೆದಿದೆ.

ಇಡೀ ರಾಜ್ಯವನ್ನು ಈ ಎರಡು ಘಟನೆಗಳು ಬೆಚ್ಚಿಬೀಳಿಸಿದ್ದು ಎಂದಿನಂತೆ ಸರ್ಕಾರ ಮತ್ತು ವಿಪಕ್ಷಗಳ ನಾಯಕರು ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ. ಹೀಗಾಗಿ ಈ ಎರಡೂ ಕೊಲೆಗಳನ್ನು ಖಂಡಿಸಿ ಇಂದು ವಿಪಕ್ಷ ಬಿಜೆಪಿ(BJP Karnataka) ಸದಸ್ಯರು ತೀವ್ರ ಪ್ರತಿಭಟನೆಗೆ ಮುಂದಾಗಿದ್ದಾರೆ.

ರಾಜಭವನಕ್ಕೆ ಮೆರವಣಿಗೆ: ಎರಡೂ ಹತ್ಯೆಗಳನ್ನು ಖಂಡಿಸಿ ಮತ್ತು ಜೈನ ಮುನಿಗಳ ಹತ್ಯೆ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಬೇಕೆಂದು ಒತ್ತಾಯಿಸಿ ಬಿಜೆಪಿ ನಾಯಕರು ಇಂದು ಬೆಳಗ್ಗೆ 11 ಗಂಟೆಗೆ ರಾಜಭವನಕ್ಕೆ ಮೆರವಣಿಗೆ ಸಾಗಲಿದ್ದಾರೆ. 

ಬಿಜೆಪಿಯಿಂದ ಸತ್ಯಾಸತ್ಯತೆ ಪರಿಶೀಲನೆಗೆ ಎರಡು ತಂಡ ರಚನೆ: ಜೈನಮುನಿ ಕಾಮಕುಮಾರನಂದಿ ಮಹಾರಾಜರ ಬರ್ಬರ ಹತ್ಯೆ ಹಾಗೂ ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಸತ್ಯಾಸತ್ಯತೆ ಪರಿಶೀಲನೆಗೆ ಎರಡು ತಂಡ ರಚನೆ ಮಾಡಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದೆ.

ಕಾಂಗ್ರೆಸ್ ಮೌನ ಪ್ರತಿಭಟನೆ: ಇನ್ನೊಂದೆಡೆ ಮೋದಿ ಉಪನಾಮ ಕೇಸಿನ ವಿಚಾರದಲ್ಲಿ ರಾಹುಲ್ ಗಾಂಧಿಯವರನ್ನು ಸಂಸದ ಸ್ಥಾನದಿಂದ ಅನರ್ಹತೆ ಮಾಡಿರುವ ಕ್ರಮವನ್ನು ಖಂಡಿಸಿ ಇಂದು ಇಡೀ ದಿನ ಕಾಂಗ್ರೆಸ್(Congress) ದೇಶಾದ್ಯಂತ ಮೌನ ಪ್ರತಿಭಟನೆ ಹಮ್ಮಿಕೊಂಡಿದೆ. 

ಬೆಂಗಳೂರಿನಲ್ಲಿ ಪ್ರತಿಭಟನೆಯ ನೇತೃತ್ವವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ವಹಿಸಲಿದ್ದಾರೆ. ರಾಹುಲ್‌ ಗಾಂಧಿ ಅವರ ರಾಜಕೀಯ ಜೀವನ ಮುಗಿಸಲು ಷಡ್ಯಂತ್ರ ನಡೆಯುತ್ತಿದ್ದು, ಇದನ್ನು ವಿರೋಧಿಸಿ ಇಂದು ಬೆಳಗಿನಿಂದ ಸಂಜೆಯವರೆಗೂ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಮೌನ ಪ್ರತಿಭಟನೆ ನಡೆಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ನಾನು, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೆವಾಲಾ, ಎಲ್ಲ ಸಚಿವರು, ಸಂಸದರು, ಶಾಸಕರು ಭಾಗವಹಿಸಲಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಪಕ್ಷ ಹೋರಾಟ ನಡೆಸುತ್ತಿದ್ದು ದೇಶದ ಎಲ್ಲ ಪ್ರಮುಖ ನಗರಗಳಲ್ಲಿ ಮೌನ ಪ್ರತಿಭಟನೆ ನಡೆಯಲಿದೆ. ನಗರದಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಕಾರ್ಯಕರ್ತರು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

SCROLL FOR NEXT