ರಾಜ್ಯ

ರಸ್ತೆಯಲ್ಲಿನ ಗುಂಡಿ ತಪ್ಪಿಸಲು ಹೋಗಿ ಸ್ಕೂಟರ್ ಸವಾರ ಬಲಿ; ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪೊಲೀಸರಿಂದ ನೋಟಿಸ್

Ramyashree GN

ಮಂಗಳೂರು: ಬೈಕಂಪಾಡಿ-ಪಣಂಬೂರು ನಡುವಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಚರಿಸುವಾಗ ರಸ್ತೆ ಗುಂಡಿಯನ್ನು ತಪ್ಪಿಸಲು ಹೋಗಿ ಉಂಟಾದ ಅಪಘಾತದಲ್ಲಿ ಬೈಕ್ ಸವಾರ ಸಾವಿಗೀಡಾಗಿರುವ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್‌ಎಚ್‌ಎಐ) ನೋಟಿಸ್ ನೀಡಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಜೈನ್ ತಿಳಿಸಿದ್ದಾರೆ.

ಅಪಘಾತದಲ್ಲಿ ಕೆಂಜಾರು ನಿವಾಸಿ ಟೈಟಸ್ ಫೆರಾವೋ (69) ಎಂಬುವವರು ಮೃತಪಟ್ಟಿದ್ದರು. ಇದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದ್ದು, ಬಳಕೆದಾರರಿಂದ ಟೋಲ್ ಸಂಗ್ರಹಿಸಿದ್ದರೂ ಹೆದ್ದಾರಿಯನ್ನು ಉತ್ತಮ ಸ್ಥಿತಿಯಲ್ಲಿ ಇಡದಕ್ಕಾಗಿ ನೆಟ್ಟಿಗರು ಎನ್ಎಚ್ಎಐಯನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ಟೈಟಸ್ ಫೆರಾವೋ ಅವರು ಸ್ಕೂಟರ್‌ನಲ್ಲಿ ಪಣಂಬೂರು ಕಡೆಗೆ ತೆರಳುತ್ತಿದ್ದಾಗ ರಸ್ತೆಯಲ್ಲಿ ಗುಂಡಿ ಇದ್ದ ಕಾರಣ ದಿಢೀರ್ ಬ್ರೇಕ್ ಹಾಕಿದ್ದಾರೆ. ಈ ವೇಳೆ ಹಿಂದಿನಿಂದ ವೇಗವಾಗಿ ಬರುತ್ತಿದ್ದ ಸರಕು ತುಂಬಿದ ಲಾರಿ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಬಳಿಕ ಸ್ಕೂಟರ್ ಮತ್ತು ಸವಾರನನ್ನು ಸುಮಾರು 100 ಮೀಟರ್ ದೂರಕ್ಕೆ ಎಳೆದೊಯ್ದಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಟೈಟಸ್ ಸ್ಥಳದಲ್ಲೇ ಮೃತಪಟ್ಟಿದ್ದರು. 

ಮಂಗಳವಾರ ಈ ಘಟನೆ ನಡೆದಿದ್ದು, ಆಗಿನಿಂದ ಎನ್‌ಎಚ್‌ಎಐನ ನಿರ್ಲಕ್ಷ್ಯದ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆ ತೀವ್ರಗೊಂಡಿದೆ. ವಿವಿಧ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಆದೇಶಗಳನ್ನು ಉಲ್ಲೇಖಿಸಿ ನಾಗರಿಕರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಕ್ರಮಕ್ಕೆ ಒತ್ತಾಯಿಸುತ್ತಿದ್ದಾರೆ.

ಈ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಪೊಲೀಸ್ ಆಯುಕ್ತರು, ಈ ಬಗ್ಗೆ ತನಿಖೆ ನಡೆಸಿ ಎನ್‌ಎಚ್‌ಎಐಗೆ ನೋಟಿಸ್ ನೀಡಲಾಗುವುದು ಎಂದರು.

SCROLL FOR NEXT