ರಾಜ್ಯ

ಮಿದುಳಿನ ರಕ್ತಸ್ರಾವದಿಂದ ಪತಿ ಸಾವು: ವಿಕಲಚೇತನ ಪತ್ನಿಯಿಂದ ಅಂಗಾಂಗ ದಾನ!

Manjula VN

ಬೆಂಗಳೂರು: ಮಿದುಳಿನ ರಕ್ತಸ್ರಾವದಿಂದಾಗಿ ಪತಿಯನ್ನು ಕಳೆದುಕೊಂಡ ದೃಷ್ಟಿ ವಿಕಲಚೇತನ ಪತ್ನಿಯೊಬ್ಬರು ಅವರ ದೇಹದ ಬಹು ಅಂಗಾಂಗಗಳನ್ನು ದಾನ ಮಾಡಿದ್ದು, ಈ ಮೂಲಕ ಆರು ಜನರ ಬಾಳಿಗೆ ಬೆಳಕಾಗಿದ್ದಾರೆ.

ಮಿದುಳು ರಕ್ತಸ್ರಾವದಿಂದ ಬಳಲುತ್ತಿದ್ದ ಪತಿಯನ್ನು ಕೋಲಾರದಿಂದ ಜುಲೈ 18ರಂದು ನಗರದ ಯಶವಂತಪುರದ ಸ್ಪರ್ಶ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಜುಲೈ.20 ರಂದು ಮಿದುಳು ನಿಷ್ಕ್ರಿಯಗೊಂಡಿದೆ ಎಂದು ವೈದ್ಯರು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಪತಿಯ ಹೃದಯ, ಶ್ವಾಸಕೋಶ, ಎರಡು ಮೂತ್ರ ಪಿಂಡಗಳು ಮತ್ತು ಕಾರ್ನಿಯಾಗಳನ್ನು ಅವರ ದೃಷ್ಟಿ ವಿಕಲಚೇತನ ಪತ್ನಿ ದಾನ ಮಾಡಿದ್ದಾರೆ. ಈ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಅಂಗಾಂಗಗಳ ಮಹತ್ವವನ್ನು ಅರ್ಥ ಮಾಡಿಕೊಂಡು, ದಾನ ಮಾಡಲು ನಿರ್ಧರಿಸಿದರು. ಇದು ನಿಜಕ್ಕೂ ಶ್ಲಾಘನೀಯವಾದದ್ದು ಎಂದು ವೈದ್ಯರು ಹೇಳಿದ್ದಾರೆ.

ಸ್ಪರ್ಶ್ ಆಸ್ಪತ್ರೆಯ ಗ್ರೂಪ್ ಸಿಒಒ ಜೋಸೆಫ್ ಪಸಂಘ ಮಾತನಾಡಿ, ಪತಿಯ ಅಗಲಿಕೆಯ ನೋವಿನ ನಡುವಲ್ಲೂ ಅವರ ಸಾವಲ್ಲೂ ಸಾರ್ಥಕತೆ ಮೆರೆಯಲಾಗಿದೆ. ಅಂಗಾಂಗ ದಾನದ ಮಹತ್ವನ್ನು ಸಾರಲಾಗಿದೆ. ಪತಿಯ ಕಾರ್ನಿಯಾಗಳನ್ನು ದಾನ ಮಾಡಿ, ಇತರರ ಬಾಳಲ್ಲಿ ಬೆಳಕಾಗಿದ್ದಾರೆಂದು ಹೇಳಿದ್ದಾರೆ.

ರಾಜ್ಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆಯ (SOTTO) ಅಧಿಕಾರಿಗಳು ಶೀಘ್ರಗತಿಯಲ್ಲಿ ಕುಟುಂಬದಿಂದ ಲಿಖಿತ ಒಪ್ಪಿಗೆಯನ್ನು ತೆಗೆದುಕೊಂಡಿದ್ದು, ಅಂಗಾಂಗ ದಾನದ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆಂದು ತಿಳಿಸಿದ್ದಾರೆ.

SCROLL FOR NEXT