ರಾಜ್ಯ

ರಾಜಕೀಯ ಲಾಭಕ್ಕಾಗಿ ನನ್ನ ಮೇಲೆ ಆರೋಪ, ರಾಜೀನಾಮೆ ಕೊಡಿಸುವುದೇ ಅವರ ಉದ್ದೇಶ: ಹನಿಟ್ರ್ಯಾಪ್ ಆರೋಪಕ್ಕೆ ಮುನಿರತ್ನ ಪ್ರತಿಕ್ರಿಯೆ

Sumana Upadhyaya

ಬೆಂಗಳೂರು: ನಾನು ಶಾಸಕನಾಗಿ ಇರುವವರೆಗೆ ನನ್ನ ವಿರುದ್ಧ ಇಂತಹ ಆರೋಪಗಳು ಬರುತ್ತಲೇ ಇರುತ್ತವೆ, ರಾಜಕೀಯದಲ್ಲಿ ಇದೇನು ಹೊಸದಲ್ಲ, ಒಂದೂವರೆ ವರ್ಷದ ಹಿಂದೆ ಡಿ ಕೆ ಸುರೇಶ್ ವಿರುದ್ಧ ಮಾತನಾಡಿದರು. ಈಗ ನನ್ನ ವಿರುದ್ಧ ಮಾತನಾಡುತ್ತಿದ್ದಾರೆ ಇದು ತಮ್ಮ ವಿರುದ್ಧ ಕೇಳಿಬಂದಿರುವ ಹನಿಟ್ರ್ಯಾಪ್ ಆರೋಪದ ಬಗ್ಗೆ ಮಾಜಿ ಸಚಿವ ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಪ್ರತಿಕ್ರಿಯೆ.

ಮುನಿರತ್ನ ವಿರುದ್ಧ ಅವರ ಆಪ್ತ ವಲಯದಲ್ಲಿಯೇ ಗುರುತಿಸಿಕೊಂಡಿದ್ದ ಮಾಜಿ ಕಾರ್ಪೋರೇಟರ್​ ವೇಲು ನಾಯ್ಕರ್ (Former Corporator Velu Naikar) ಗಂಭೀರ ಆರೋಪ ಮಾಡಿದ್ದಾರೆ. ನಿನ್ನೆ ಭಾನುವಾರ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಸಂಸದ ಡಿಕೆ ಸುರೇಶ್ ಸಮ್ಮುಖದಲ್ಲಿ ವೇಲು ನಾಯ್ಕರ್ ಕಾಂಗ್ರೆಸ್ ಸೇರ್ಪಡೆಯಾದರು. ಕಾಂಗ್ರೆಸ್ ಸೇರಿದ ಬಳಿಕ ಮಾತನಾಡಿದ ವೇಲು ನಾಯ್ಕರ್, ಸಚಿವರಾಗಿದ್ದ ಮುನಿರತ್ನ ಹನಿಟ್ರ್ಯಾಪ್ ಮಾಡಿಸುತ್ತಿದ್ದರು ಎಂದು ಆರೋಪಿಸಿದರು. ನಾವು ಮುನಿರತ್ನ ಅವರಿಗೆ ಚುನಾವಣೆ ಎದುರಿಸೋದು ಹೇಗೆ ಎಂದು ಕೇಳಿದೆವು. ಅದಕ್ಕೆ ಮುನಿರತ್ನ ನಿಮ್ಮಗಳದ್ದು ಈಸ್ಟ್ ಮನ್ ಕಲರ್ ಪಿಚ್ಚರ್ ಇದೆ ತೋರಿಸ್ಲಾ ಇಲ್ಲ ಕೆಲಸ ಮಾಡ್ತಿರಾ ಅಂತ ಹೆದರಿಸುತ್ತಿದ್ದರು ಎಂದು ಆರೋಪ ಮಾಡಿರುವುದು ಸಂಚಲನ ಸೃಷ್ಟಿಸಿದೆ.

ಶಾಸಕ ಸ್ಥಾನಕ್ಕೆ ನಾನು ರಾಜೀನಾಮೆ ನೀಡುವುದೇ ಅವರ ಉದ್ದೇಶವಾಗಿದೆ, ನನ್ನ ತೇಜೋವಧೆ ಮಾಡಬೇಕೆಂದು ಹೀಗಿಲ್ಲೆ ಮಾಡುತ್ತಿದ್ದಾರೆ, ರಾಜಕೀಯದಲ್ಲಿರುವವರಿಗೆ ಇದು ಹೊಸದಲ್ಲ ಎಂದರು.

ವೇಲು ನಾಯ್ಕರ್ ನನ್ನ ಆಪ್ತವಲಯದಲ್ಲಿಯೇ ಗುರುತಿಸಿಕೊಂಡಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ, ಸಹಜವಾಗಿಯೇ ಒಂದಿಷ್ಟು ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಸೇರಿರುತ್ತಾರೆ. ಈ ಹಿಂದೆ ವೇಲು ನಾಯ್ಕರ್ ನನ್ನ ಮುಂದೆ ಸಂಸದ ಡಿಕೆ ಸುರೇಶ್ ಮತ್ತು ಕಾಂಗ್ರೆಸ್ ಮುಖಂಡೆ ಕುಸುಮಾ ಹನುಮಂತರಾಯಪ್ಪ ಬಗ್ಗೆ ತುಂಬಾ ಮಾತನಾಡಿದ್ದಾರೆ. ಕಾಂಗ್ರೆಸ್ ಸೇರಿರುವ ಅವರು ಇನ್ಮುಂದೆ ಡಿಕೆ ಸುರೇಶ್, ಕುಸುಮಾ ಬಗ್ಗೆ ಮಾತಾಡದಿದ್ರೆ ಸಾಕು. ಅವರು ಮಾತನಾಡಿರೋದನ್ನೆಲ್ಲ ಈಗ ಮಾಧ್ಯಮಗಳ ಮುಂದೆ ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

SCROLL FOR NEXT