ರಾಜ್ಯ

ಪಾಲಿಕೆ ಅಡಿಯ ಶಾಲೆಗಳಿಗೆ ಅರ್ಹ ಶಿಕ್ಷಕರ ನೇಮಕಾತಿಗೆ ಸಮಿತಿ ರಚಿಸಿದ ಬಿಬಿಎಂಪಿ

Ramyashree GN

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನೇಮಕಗೊಳ್ಳಲಿರುವ ಶಿಕ್ಷಕರ ಅರ್ಹತೆ ಮತ್ತು ಹಿನ್ನೆಲೆ ಪರಿಶೀಲನೆ ನಡೆಸಲು ವಿಶೇಷ ಆಯುಕ್ತರಾದ (ಶಿಕ್ಷಣ) ಐಎಎಸ್ ಅಧಿಕಾರಿ ಪ್ರೀತಿ ಗೆಹ್ಲೋಟ್ ಅವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿದೆ.

2022-23ರ ರಾಜ್ಯ ಪರೀಕ್ಷೆಗಳಲ್ಲಿ ಬಿಬಿಎಂಪಿಗೆ ಸೇರಿದ ಶಾಲೆಗಳ ಕಳಪೆ ಫಲಿತಾಂಶಕ್ಕೆ ಅನರ್ಹ ಶಿಕ್ಷಕರೇ ಕಾರಣ ಎಂದು ಅಧಿಕಾರಿಗಳು ಸೂಚಿಸಿದ್ದಾರೆ. 

ಅರ್ಹ ಶಿಕ್ಷಕರನ್ನು ನೇಮಿಸುವಂತೆ ಮನವಿ ಮಾಡಿದರೂ, ಯಾವುದೇ ಪ್ರಯೋಜನವಾಗಿಲ್ಲ. ಶಿಕ್ಷಕರಾಗಲು ಪಿಯುಸಿ ತೇರ್ಗಡೆ ಮತ್ತು ಟಿಇಟಿ ಸೇರಿದಂತೆ ಮೂಲಭೂತ ವಿದ್ಯಾರ್ಹತೆಗಳ ಅಗತ್ಯವಿದೆ. ಆದರೆ, ಶಿಕ್ಷಕರ ಹಿನ್ನೆಲೆ ಪರಿಶೀಲನೆಯಿಂದ ಹಲವರಿಗೆ ಈ ವಿದ್ಯಾರ್ಹತೆಯೇ ಇಲ್ಲ ಎಂಬುದು ತಿಳಿದುಬಂದಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಟಿಎನ್‌ಐಇಗೆ ತಿಳಿಸಿದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಒಟ್ಟಾರೆ ಶೇ 83.89ರಷ್ಟು ಮಂದಿ ಉತ್ತೀರ್ಣರಾಗಿದ್ದರೆ, ಬಿಬಿಎಂಪಿ ಶಾಲೆಗಳಲ್ಲಿ ಶೇ 67.53 ರಷ್ಟು ವಿದ್ಯಾರ್ಥಿಗಳು ಮಾತ್ರ ಉತ್ತೀರ್ಣರಾಗಿದ್ದಾರೆ. ಈ ಶಾಲೆಗಳು ಐತಿಹಾಸಿಕವಾಗಿ ಬೋರ್ಡ್ ಪರೀಕ್ಷೆಗಳಲ್ಲಿ ಕಡಿಮೆ ಶೇಕಡಾವಾರು ಉತ್ತೀರ್ಣವನ್ನು ಹೊಂದಿವೆ. ಕೆಲವೊಮ್ಮೆ ಶೇ 50ಕ್ಕಿಂತ ಕಡಿಮೆ ಫಲಿತಾಂಶ ಪಡೆದಿವೆ. ಅಲ್ಲದೆ, ಈ ಶಾಲೆಗಳೂ ಶಿಕ್ಷಕರ ಕೊರತೆಯಿಂದ ಬಳಲುತ್ತಿವೆ.

ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 142 ಶಾಲೆಗಳಿವೆ. ಅವುಗಳು ಮೂಲಸೌಕರ್ಯ ಮತ್ತು ಸಲಕರಣೆಗಳ ಕೊರತೆಯ ಸಾಮಾನ್ಯ ಸಮಸ್ಯೆಗಳನ್ನು ಎದುರಿಸುತ್ತಿವೆ. ಆದರೆ, ಅರ್ಹ ಶಿಕ್ಷಕರ ಕೊರತೆಯು ಒಂದು ಪ್ರಮುಖ ವಿಚಾರವಾಗಿದೆ. 'ನಾವು ವೃತ್ತಿಪರ ಮತ್ತು ತಮ್ಮ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸಲು ಸಮರ್ಥರಾಗಿರುವ ಅರ್ಹ ಶಿಕ್ಷಕರನ್ನು ಕೇಳುತ್ತಿದ್ದೇವೆ' ಎಂದು ಗಿರಿನಾಥ್ ಹೇಳಿದರು.

ಸದ್ಯ ಶಿಕ್ಷಕರ ನೇಮಕ ಪ್ರಕ್ರಿಯೆ ನಡೆಯುತ್ತಿದ್ದು, ಜೂನ್ ಅಂತ್ಯದೊಳಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಅವಧಿ ಮುಗಿಯಲಿರುವ ಹಲವು ಶಿಕ್ಷಕರನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲಾಗಿದೆ.

SCROLL FOR NEXT