ರಾಜ್ಯ

ಚಾಮರಾಜನಗರದ ಆಕ್ಸಿಜನ್ ದುರಂತ: ಮರು ತನಿಖೆಗೆ ಆದೇಶಿಸುವಂತೆ ರಾಜ್ಯ ಸರ್ಕಾರಕ್ಕೆ ಆರೋಗ್ಯ ಸಚಿವ ಮನವಿ

Manjula VN

ಬೆಂಗಳೂರು: 2021ರಲ್ಲಿ ಕೋವಿಡ್‌ ಉಲ್ಬಣಗೊಂಡಿದ್ದ ಸಂದರ್ಭದಲ್ಲಿ ಆಕ್ಸಿಜನ್ ಕೊರತೆಯಿಂದ 36 ಮಂದಿ ಸಾವಿಗೀಡಾದ ಚಾಮರಾಜನಗರ ಜಿಲ್ಲಾ ಆಸ್ಪತ್ರೆ ದುರಂತ ಪ್ರಕರಣವನ್ನು ಮರು ತನಿಖೆಗೆ ಆದೇಶಿಸುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಶುಕ್ರವಾರ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ದಿನೇಶ್ ಗುಂಡೂರಾವ್ ಅವರು, ಬಿಜೆಪಿ ಸರ್ಕಾರ ಸಲ್ಲಿಸಿರುವ ವರದಿ ತೃಪ್ತಿಕರವಾಗಿಲ್ಲದ ಕಾರಣ ಮರು ತನಿಖೆಗೆ ಕೋರಿದ್ದೇನೆ ಎಂದು ಹೇಳಿದರು.

ಹಿಂದಿನ ತನಿಖೆ ಸರಿಯಾಗಿಲ್ಲ, ವರದಿ ಸರಿಯಿಲ್ಲ. ಹೊಣೆಗಾರರನ್ನು ಪಟ್ಟಿ ಮಾಡಲಾಗಿಲ್ಲ ಅಥವಾ ಹೊಣೆಗಾರರನ್ನಾಗಿ ಮಾಡಲಾಗಿಲ್ಲ. ಡಿಪಿಎಆರ್‌ನಲ್ಲಿ (ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ) ಮತ್ತೊಂದು ಸಮಿತಿಯನ್ನು ರಚಿಸುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ, ಹೊಸ ತನಿಖೆಗೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.

ಹಿಂದಿನ ಸರ್ಕಾರ ಸಮಿತಿ ರಚಿಸಿ ತನಿಖೆಗೆ ಆದೇಶಿಸಲು ವಿಳಂಬ ಮಾಡಿತ್ತು. ಇದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಗಳ ನಡುವೆ ಅಂತರಗಳನ್ನು ತೋರಿಸುತ್ತಿದೆ. ಮರು ತನಿಖೆಗೆ ಕಾಲಾವಕಾಶ ಬೇಕಾಗುತ್ತದೆ. ಆದರೆ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ. ಗಂಭೀರ ಸಮಸ್ಯೆಯಾಗಿರುವುದರಿಂದ ಸಮಯವನ್ನು ನಾವು ಲೆಕ್ಕಿಸುವುದಿಲ್ಲ. ಈ ಪ್ರಕರಣದಲ್ಲಿ ಹೊಣೆಗಾರರು ಯಾವುದೇ ಹುದ್ದೆಯಲ್ಲಿದ್ದರೂ ಅವರಿಗೆ ಶಿಕ್ಷೆಯಾಗಬೇಕಿದೆ ಎಂದರು.

SCROLL FOR NEXT