ರಾಜ್ಯ

ಬಿಬಿಎಂಪಿ ಸಭೆಯಲ್ಲಿ ಸುರ್ಜೆವಾಲಗೆ ಏನು ಕೆಲಸ; ಇದು ಸಿದ್ದರಾಮಯ್ಯ ಸರ್ಕಾರವೋ 10 ಜನಪಥ್ ಸರ್ಕಾರವೋ?: ಬಿಜೆಪಿ

Srinivas Rao BV

ಬೆಂಗಳೂರು: ಬಿಬಿಎಂಪಿ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರ ಚುನಾವಣೆ ನಡೆಸಲು ತೀರ್ಮಾನಿಸಿದ್ದು, ಈ ಸಂಬಂಧ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಸಭೆ ನಡೆಸಿದೆ. 

ಈ ಸಭೆಯಲ್ಲಿ ಕಾಂಗ್ರೆಸ್ ನ ಉಸ್ತುವಾರಿ ರಣ್ ದೀಪ್ ಸಿಂಗ್ ಸುರ್ಜೆವಾಲ ಭಾಗವಹಿಸಿರುವುದು ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ. 

ಬೆಂಗಳೂರಿನ ಶಾಂಗ್ರಿಲಾ ಹೋಟೆಲ್‌ನಲ್ಲಿ ಎಟಿಎಂ ಸರ್ಕಾರದ ಗೌಪ್ಯ ಸಭೆಯ ರಹಸ್ಯವೇನು...? ಎಂದು ಬಿಜೆಪಿ ಟ್ವೀಟ್ ನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಿವಿದಿದೆ. 

ರಾಜ್ಯ ಸರಕಾರದೊಟ್ಟಿಗಾಗಲಿ, ಬಿಬಿಎಂಪಿ ಒಟ್ಟಿಗಾಗಲಿ ಯಾವುದೇ ರೀತಿಯ ಅಧಿಕೃತ ಸಂಬಂಧವಿರದ ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲರಿಗೆ ಬಿಬಿಎಂಪಿ ಉನ್ನತ ಅಧಿಕಾರಿಗಳೊಟ್ಟಿಗೇನು ಕೆಲಸ..? ಇದು 85% ಡೀಲ್‌ ಫಿಕ್ಸಿಂಗ್ ಸಭೆಯೇ..? ಉತ್ತರಿಸಿ ಮಾನ್ಯ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರೇ ಎಂದು ಬಿಜೆಪಿ ಟ್ವೀಟ್ ಮಾಡಿದೆ.

 
ಇನ್ನು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಸಹ ಈ ಬಗ್ಗೆ ಟ್ವೀಟ್ ಮಾಡಿದ್ದು,  ರಾಜ್ಯದಲ್ಲಿರುವುದು ಸಿದ್ದರಾಮಯ್ಯನವರ ನೇತೃತ್ವದ ಸರಕಾರವೋ ಅಥವಾ ದಿಲ್ಲಿಯ ಜನಪಥ ರಸ್ತೆಯ 10ನೇ ನಂಬರಿನ ಹಂಗಿನ ಸರಕಾರವೋ? ಎಂದು ಪ್ರಶ್ನಿಸಿದ್ದಾರೆ. 

ಕನ್ನಡಿಗರು ಮತ ಹಾಕಿದ್ದು ಕೈ ಸರಕಾರಕ್ಕಾ?ಅಥವಾ ಕೈಗೊಂಬೆ ಸರಕಾರಕ್ಕಾ? ಪಾಪ.. ಜನರ ವೋಟು ಹಂಗಿನ ಸರಕಾರದ ಪಾಲಾಗಿದೆ. ಸರಕಾರಕ್ಕೆ ತಿಂಗಳು ತುಂಬುವ ಮೊದಲೇ ಅದು ಸಾಬೀತಾಗಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ. ಸರಕಾರದ ಅಧಿಕೃತ ಸಭೆಗಳನ್ನು ಹೈಕಮಾಂಡಿನ ನಿಲಯದ ಕಲಾವಿದರೇ ನಡೆಸುವ ಕರ್ಮ ಕರ್ನಾಟಕದ್ದು! ನಾನು ಟ್ಯಾಗ್ ಮಾಡಿರುವ ಫೋಟೋ ಆ ದೈನೇಸಿ ಸ್ಥಿತಿಗೆ ಸಾಕ್ಷಿ. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಂದೀಪ್ ಸುರ್ಜೆವಾಲಾ ಅವರಿಗೆ ಸರಕಾರದ ಸಭೆಗಳನ್ನು ನಡೆಸುವ ಜವಾಬ್ದಾರಿ, ಅವಕಾಶ ಕೊಟ್ಟವರು ಯಾರು ಎಂದು ಹೆಚ್ ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

SCROLL FOR NEXT