ಬೆಂಗಳೂರು: ಬಿಜೆಪಿ 'ರೇಟ್ ಕಾರ್ಡ್ ಮಾನನಷ್ಟ ಮೊಕದ್ದಮೆ' ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸೇರಿ 36 ಕೈ ಮುಖಂಡರಿಗೆ ಕೋರ್ಟ್ ಸಮನ್ಸ್ ಜಾರಿ ಮಾಡಿದೆ.
ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್‌ನಿಂದ ಸಮನ್ಸ್ ಜಾರಿ ಮಾಡಲಾಗಿದ್ದು, ಜುಲೈ 28ರಂದು ಖುದ್ದು ಹಾಜರಾಗುವಂತೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಗೆ ಸೂಚನೆ ನೀಡಿದೆ. ಈ ಹಿಂದೆ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನೆ ವೇಳೆ ನಿಯಮ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಕಾಂಗ್ರೆಸ್ ಮುಖಂಡರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಲಾಗಿತ್ತು. ಇದೀಗ ಈ ಪ್ರಕರಣವು ವಿಚಾರಣೆಗೆ ಯೋಗ್ಯ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು(ಜೂನ್ 13) ಜನಪ್ರತಿನಿಧಿಗಳ ಸಮನ್ಸ್ ನೀಡಿದೆ.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು ಸೂಕ್ತ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದೆ. ಅಲ್ಲದೆ, ಈ ಪ್ರಕರಣವು ವಿಚಾರಣೆಗೆ ಯೋಗ್ಯವೆಂದು ಪರಿಗಣಿಸಿದೆ. ಹೀಗಾಗಿ ದೂರುದಾರರು ಮತ್ತು ಸಾಕ್ಷಿಗಳ ಹೇಳಿಕೆ ದಾಖಲಿಸಲು ದಿನಾಂಕವನ್ನು ನಿಗದಿ ಮಾಡಿದೆ. ಅಂತೆಯೇ ಕಾಂಗ್ರೆಸ್ ಮತ್ತು ಕಾಂಗ್ರೆಸ್ ನಾಯಕರ ವಿರುದ್ಧ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣದ ವಿಚಾರಣೆಯನ್ನು ಜುಲೈ 27ಕ್ಕೆ ಮುಂದೂಡಲಾಗಿದೆ. ಬಿಜೆಪಿ ಪರವಾಗಿ ವಕೀಲ ವಿನೋದ್ ಕುಮಾರ್ ಅವರು ಅರ್ಜಿ ಸಲ್ಲಿಸಿದ್ದರು. ನ್ಯಾ. ಜೆ. ಪೀತ್ ಅವರ ನ್ಯಾಯಪೀಠವು ವಿಚಾರಣೆ ನಡೆಸಲು ಅನುಮತಿ ನೀಡಿದೆ.
ಗುತ್ತಿಗೆದಾರ ಸಂತೋಷ್ ಪಾಟೀಲ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಸಂಪುಟದಿಂದ ಕೈಬಿಡುವಂತೆ ಕಾಂಗ್ರೆಸ್ ಮುಖಂಡರು, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ನಿವಾಸದ ಮುಂದೆ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಹಾಗೂ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಸೇರಿದಂತೆ ಒಟ್ಟು 36 ಕಾಂಗ್ರೆಸ್ ನಾಯಕರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಕಾಂಗ್ರೆಸ್ ನಾಯಕರ ವಿರುದ್ಧ ಸೆಕ್ಷನ್ 341,143 ಐಪಿಸಿ ಮತ್ತು 103 ಕೆಪಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪತ್ರಿನಿಧಿಗಳ ಕೋರ್ಟ್, ಜುಲೈ 28ರಂದು ಖುದ್ದು ಹಾಜರಾಗುವಂತೆ 36 ಕಾಂಗ್ರೆಸ್ ನಾಯಕರಿಗೆ ಸಮನ್ಸ್ ನೀಡಿದೆ.
ಪತ್ರಿಕೆಗಳಲ್ಲಿ ಸುಳ್ಳು ಸುದ್ದಿ ಮತ್ತು ಸುಳ್ಳು ಆರೋಪಗಳ ಜಾಹೀರಾತು ಪ್ರಕಟ ಮಾಡಿರುವ ಆರೋಪ ಈಗ ಈ ಜನಪ್ರತಿನಿಧಿಗಳ ಮೇಲೆ ಕೇಳಿಬಂದಿದೆ. ಸಾರ್ವಜನಿಕರಿಗೆ ಸುಳ್ಳು ಮಾಹಿತಿ ಕೊಡಲಾಗಿದೆ. ಇದರಿಂದ ಬಿಜೆಪಿ ಹಾಗೂ ಬಿಜೆಪಿ ನಾಯಕರ ತೇಜೋವಧೆಯಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖ ಮಾಡಲಾಗಿದೆ. ಬಿಜೆಪಿ ಪರವಾಗಿ ವಿವೇಕ್ ಸುಬ್ಬಾರೆಡ್ಡಿ ವಾದಿಸಿದ್ದಾರೆ.