ರಾಜ್ಯ

ಬಿಟ್‌ಕಾಯಿನ್ ತನಿಖೆಯನ್ನು ಸಿಐಡಿಗೆ ಒಪ್ಪಿಸುವುದು ಕಳ್ಳನ ಕೈಗೆ ಕೀಲಿ ಕೊಟ್ಟಂತೆ: ಸಚಿವ ಪ್ರಿಯಾಂಕ್ ಖರ್ಗೆ

Manjula VN

ಬೆಂಗಳೂರು: ಬಿಟ್‌ಕಾಯಿನ್ ತನಿಖೆಯನ್ನು ಸಿಐಡಿಗೆ ಒಪ್ಪಿಸುವುದು ಕಳ್ಳನ ಕೈಗೆ ಕೀಲಿ ಕೊಟ್ಟಂತೆ ಎಂದು ಹೇಳುವ ಮೂಲಕ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಬುಧವಾರ ಹೇಳಿದರು.

ಸಚಿವ ಸಂಪುಟ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಸರ್ಕಾರದಲ್ಲಿ ಪಿಎಸ್ಐ ನೇಮಕಾತಿ ಹಗರಣ, ಬಿಟ್‌ ಕಾಯಿನ್‌ ಹಗರಣ, ಗಂಗಾ ಕಲ್ಯಾಣ ಯೋಜನೆಯಲ್ಲಿ ಹಗರಣ ಹೀಗೆ ವೈವಿಧ್ಯಮಯ ಹಗರಣಗಳು ನಡೆದಿವೆ. ಈ ಎಲ್ಲ ಹಗರಣಗಳನ್ನು ಒಂದೇ ರೀತಿಯ ಸಮಿತಿಗೆ ವಹಿಸುವುದು ಸರಿಯಾಗುವುದಿಲ್ಲ. ಬಿಟ್‌ಕಾಯಿನ್ ತನಿಖೆಯನ್ನು ಸಿಐಡಿಗೆ ಒಪ್ಪಿಲಿದರೆ, ಒಂದು ರೀತಿ ಕಳ್ಳನ ಕೈಗೆ ಕೀಲಿ ಕೊಟ್ಟಂತೆ ಆಗುತ್ತದೆ. ಹೀಗಾಗಿ “ಕೆಲವು ಹಗರಣಗಳ ತನಿಖೆಗೆ ಎಸ್‌ಐಟಿ, ಸ್ಪೆಷಲ್‌ ಟಾಸ್ಕ್‌ ಫೋರ್ಸ್‌, ಎಸಿಎಸ್‌ ಮಟ್ಟದ ಅಧಿಕಾರಿಗಳ ಸಮಿತಿ ಹೀಗೆ ಬೇರೆ ಬೇರೆ ಹಗರಣಗಳಿಗೆ ಬೇರೆ ಬೇರೆ ತನಿಖಾ ತಂಡ ರಚನೆ ಮಾಡಲಾಗುವುದು. ಈ ಬಗ್ಗೆ ಮುಖ್ಯಮಂತ್ರಿ ತೀರ್ಮಾನಿಸಲಿದ್ದಾರೆ” ಎಂದು ಹೇಳಿದರು.

“ಹಿಂದಿನ ಬಿಜೆಪಿ ಸರ್ಕಾರ ಬಹಳ ವಿಭಿನ್ನವಾಗಿ ಹಗರಣಗಳನ್ನು ಮಾಡಿದೆ. ತಂತ್ರಜ್ಞಾನ ಸ್ಕ್ಯಾಮ್ ಆಗಿದೆ, ಬಿಟ್ ಕಾಯಿನ್ ಹಗರಣದಲ್ಲಿ ನಮಗೆ ಸೈಬರ್ ಎಕ್ಸ್‌ಪರ್ಟ್‌ ಬೇಕಾಗುತ್ತದೆ. ತಂತ್ರಜ್ಞಾನ ತಿಳಿದ ಅಧಿಕಾರಿಗಳ ಅವಶ್ಯಕತೆ ಇದೆ” ಎಂದು ತಿಳಿಸಿದರು.

“ಕಳೆದ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್‌ ಕೆಲವರ ಬಗ್ಗೆ ಚರ್ಚಿಸಿದ್ದರು. ಯಾವ ತಂಡ ರಚನೆ ಮಾಡಬೇಕು ಎಂಬುದು ಈಗಾಗಲೇ ಸೂಚನೆ ನೀಡಲಾಗಿದೆ” ಎಂದು ಹೇಳಿದರು.

SCROLL FOR NEXT