ರಾಮನಗರ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಮತ್ತೊಂದು ಅಪಘಾತ ಸಂಭವಿಸಿದ್ದು ಕೆಟ್ಟು ನಿಂತಿದ್ದ ಲಾರಿಗೆ ಸ್ಕೂಟರ್ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಬಿಡದಿ ಸಮೀಪದ ಕೆಂಪನಹಳ್ಳಿ ಗೇಟ್ ಬಳಿ ಘಟನೆ ನಡೆದಿದ್ದು ಮೃತರನ್ನು 65 ವರ್ಷದ ಸನಾವುಲ್ಲಾ ಬೇಗಂ ಮತ್ತು 60 ವರ್ಷದ ನೂರ್ ಜಹಾನ್ ಎಂದು ಗುರುತಿಸಲಾಗಿದೆ. ಮೃತರು ಬೆಂಗಳೂರಿನ ಬಾಪೂಜಿ ನಗರದ ನಿವಾಸಿಗಳಾಗಿದ್ದು ಕಾರ್ಯಕ್ರಮ ನಿಮಿತ್ತ ರಾಮನಗರಕ್ಕೆ ಬಂದಿದ್ದರು.
ಇದನ್ನೂ ಓದಿ: ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ ಸೂಚನಾ ಫಲಕ, ಕ್ಯಾಮರಾ ಅಳವಡಿಕೆ ಅಗತ್ಯವಿದೆ: ಎಡಿಜಿಪಿ ಅಲೋಕ್ ಕುಮಾರ್
ಕಾರ್ಯಕ್ರಮ ಮುಗಿಸಿ ಹಿಂದಿರುಗುತ್ತಿದ್ದಾಗ ಕೆಟ್ಟು ನಿಂತಿದ್ದ ಲಾರಿಗೆ ವೇಗವಾಗಿ ಬಂದು ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ. ಅಪಘಾತ ಸ್ಥಳಕ್ಕೆ ಬಿಡದಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ರಾಜರಾಜೇಶ್ವರಿ ಆಸ್ಪತ್ರೆಗೆ ಮೃತದೇಹಗಳನ್ನು ರವಾನಿಸಿದ್ದಾರೆ.