ರಾಜ್ಯ

ಸಚಿವರುಗಳ ಒಪ್ಪಿಗೆ ಪಡೆದು ಗುತ್ತಿಗೆದಾರರಿಗೆ ಬಾಕಿ ಹಣ ನೀಡಲು ಒಪ್ಪಿಗೆ: ಸರ್ಕಾರದ ಸುತ್ತೋಲೆ

Sumana Upadhyaya

ಬೆಂಗಳೂರು: ಮೇ 10 ರಂದು ನಡೆದ ವಿಧಾನಸಭಾ ಚುನಾವಣೆಯ ನಂತರ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ನಿಲ್ಲಿಸಿದ್ದ ಅಭಿವೃದ್ಧಿ ಕಾಮಗಾರಿಗಳನ್ನು ಪುನರಾರಂಭಿಸಲು ಮತ್ತು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹೊರಡಿಸಲಾಗಿದ್ದ ಟೆಂಡರ್ ಗೆ ಚಾಲನೆ ನೀಡಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. 

ಸರ್ಕಾರಿ ಆದೇಶದ ಪ್ರಕಾರ, ಬಾಕಿ ಇರುವ ಬಿಲ್‌ಗಳು ಮತ್ತು ಕೆಲಸದ ಆದೇಶಗಳನ್ನು ಪರಿಶೀಲಿಸಿ ಸಂಬಂಧಪಟ್ಟ ಇಲಾಖೆಗಳ ಸಚಿವರ ಅನುಮೋದನೆಯನ್ನು ಪಡೆದ ನಂತರ ಹಣವನ್ನು ಬಿಡುಗಡೆ ಮಾಡಲಾಗುತ್ತದೆ.

ಹಣಕಾಸು ಇಲಾಖೆ ಕಾರ್ಯದರ್ಶಿ ಏಕರೂಪ ಕೌರ್ ಹೊರಡಿಸಿದ ಸುತ್ತೋಲೆಯಲ್ಲಿ ನಿಗಮಗಳು, ಮಂಡಳಿಗಳು ಮತ್ತು ಅಧಿಕಾರಿಗಳು ಸೇರಿದಂತೆ ಎಲ್ಲಾ ಇಲಾಖೆಗಳ ಮುಖ್ಯಸ್ಥರು ಬಿಲ್‌ಗಳನ್ನು ಪರಿಶೀಲಿಸಲು ಮತ್ತು ಸಚಿವರುಗಳಿಂದ ಒಪ್ಪಿಗೆ ಪಡೆದ ನಂತರವೇ ಅವುಗಳನ್ನು ತೆರವುಗೊಳಿಸಲು ಸೂಚಿಸಿದ್ದಾರೆ. ಸಚಿವರ ಅನುಮೋದನೆ ಇಲ್ಲದೆ ಯಾವುದೇ ಹಣ ಬಿಡುಗಡೆ ಮಾಡದಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಆದಾಗ್ಯೂ, ಶಾಸನಬದ್ಧ ಪಾವತಿಗಳನ್ನು ಬಿಡುಗಡೆ ಮಾಡಬೇಕಾಗುತ್ತದೆ. 

ಹೊರಗಿನ ಏಜೆನ್ಸಿಗಳ ಮೂಲಕ ಕೈಗೊಳ್ಳುವ ಯೋಜನೆಗಳಿಗೆ ಹಣ ಅಥವಾ ಅವರ ಪಾಲನ್ನು ಬಿಡುಗಡೆ ಮಾಡುವಂತೆ ಸುತ್ತೋಲೆಯಲ್ಲಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈಗಾಗಲೇ ನಡೆಯುತ್ತಿರುವ ಕಾಮಗಾರಿಗಳ ಸರಕು ಮತ್ತು ಸೇವಾ ತೆರಿಗೆ (GST) ಅಂಶವನ್ನು ಬಿಡುಗಡೆ ಮಾಡುವಂತೆಯೂ ತಿಳಿಸಲಾಗಿದೆ.

ಸರ್ಕಾರದ ಹಣಕಾಸು ಇಲಾಖೆಯ ಎಲ್ಲಾ ಹೆಚ್ಚುವರಿ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಖಜಾನೆ ಇಲಾಖೆ ಆಯುಕ್ತರು, ಎಲ್ಲಾ ಇಲಾಖೆಗಳ ಮುಖ್ಯಸ್ಥರು, ವಿವಿಧ ನಿಗಮ-ಮಂಡಳಿಗಳು ಮತ್ತು ಪ್ರಾಧಿಕಾರಗಳು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್‌ಗಳ ಮುಖ್ಯ ಹಣಕಾಸು ಅಧಿಕಾರಿಗಳು, ಹೆಚ್ಚುವರಿ, ಜಂಟಿ ಮತ್ತು ಉಪ ಕಾರ್ಯದರ್ಶಿಗಳಿಗೆ ಸುತ್ತೋಲೆ ಕಳುಹಿಸಲಾಗಿದೆ. 

ಮೇ 22ರಂದು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ದಿನಗಳಲ್ಲಿ, ಅವರ ಕಚೇರಿಯು ಇಲಾಖೆಗಳು, ನಿಗಮಗಳು, ಮಂಡಳಿಗಳು ಮತ್ತು ಅಧಿಕಾರಿಗಳಿಗೆ ಹಿಂದಿನ ಬಿಜೆಪಿ ಸರ್ಕಾರವು ತೆಗೆದುಕೊಂಡ ಎಲ್ಲಾ ಯೋಜನೆಗಳಿಗೆ ಪಾವತಿಗಳನ್ನು ತಕ್ಷಣವೇ ನಿಲ್ಲಿಸುವಂತೆ ಆದೇಶಿ ನೀಡಿದ್ದರು. ಆರಂಭವಾಗದ ಕಾಮಗಾರಿಗಳಿಗೆ ಚಾಲನೆ ನೀಡಬಾರದು ಎಂದೂ ಕೂಡ ಆದೇಶ ನೀಡಲಾಗಿತ್ತು.

SCROLL FOR NEXT