ರಾಜ್ಯ

ಕುಂಬಳಗೋಡಿನಿಂದ ಮೈಸೂರಿನವರೆಗೆ ಎಚ್.ಡಿ. ದೇವೇಗೌಡ 100 ಕಿ.ಮೀ ರೋಡ್ ಶೋ ನಡೆಸಲು ಜೆಡಿಎಸ್ ಚಿಂತನೆ

Ramyashree GN

ಬೆಂಗಳೂರು: ಜೆಡಿಎಸ್ ತನ್ನ ಪಂಚರತ್ನ ಯಾತ್ರೆಯ ಸಮಾರೋಪ ಕಾರ್ಯಕ್ರಮಕ್ಕೂ ಮುನ್ನ ಮಾರ್ಚ್ 26 ರಂದು ಬೆಂಗಳೂರಿನ ಕುಂಬಳಗೋಡಿನಿಂದ ಮೈಸೂರಿನವರೆಗೆ 100 ಕಿಲೋಮೀಟರ್ ತೆರೆದ ವ್ಯಾನ್‌ನಲ್ಲಿ ಪಕ್ಷದ ವರಿಷ್ಠ ಎಚ್‌ಡಿ ದೇವೇಗೌಡರನ್ನು ಕರೆದುಕೊಂಡು ಹೋಗಲಿದೆ. 

ಮಂಗಳವಾರವಷ್ಟೇ ಗೌಡರು ವಯೋಸಹಜ ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗಿದ್ದು, ಶನಿವಾರ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ.

ಪಕ್ಷದ ಕಚೇರಿಯಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಕಡೂರು ಕ್ಷೇತ್ರದ ಕಾಂಗ್ರೆಸ್ ಪ್ರಮುಖ ಸಿ.ಎಂ. ಧನಂಜಯ ಹಾಗೂ ಕೊಳ್ಳೇಗಾಲ ಕ್ಷೇತ್ರದ ನಿವೃತ್ತ ಸರ್ಕಲ್ ಇನ್‌ಸ್ಪೆಕ್ಟರ್ ಪುಟ್ಟಸ್ವಾಮಿ ಅವರು ಪಕ್ಷಕ್ಕೆ ಸೇರ್ಪಡೆಯಾದರು. 

ಕಾರ್ಯಕ್ರಮದಲ್ಲಿ ಮಾತನಾಡಿದ ಪಕ್ಷದ ಹಿರಿಯ ಮುಖಂಡ ಎಚ್‌ಡಿ ಕುಮಾರಸ್ವಾಮಿ, ಹತ್ತು ಲಕ್ಷಕ್ಕೂ ಅಧಿಕ ಜನ ಸೇರುವ ನಿರೀಕ್ಷೆಯಿರುವುದರಿಂದ ಮೈಸೂರು ರ‍್ಯಾಲಿ ಇತಿಹಾಸ ಸೃಷ್ಟಿಸಲಿದೆ. ಇದು ನನ್ನ ರಾಜಕೀಯ ಜೀವನದ ಇತಿಹಾಸದಲ್ಲಿಯೇ ಮಹೋನ್ನತ ಸಮಾವೇಶ ಆಗಲಿದೆ. ಈವರೆಗೂ ಯಾರೂ ಮಾಡಿರದಂಥ ಸಮಾವೇಶ ಅದಾಗಿರುತ್ತದೆ. 60 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಇದೇ ತಿಂಗಳ 11 ಅಥವಾ 14ರಂದು ಪ್ರಕಟಿಸಲಾಗುವುದು ಎಂದರು.

ಕುಂಬಳಗೋಡಿನಿಂದ ಪ್ರಾರಂಭವಾಗಿ ಮೈಸೂರಿನವರೆಗೆ ಸುಮಾರು 100 ಕೀ.ಮೀ ದೂರ ಬೃಹತ್ ರೋಡ್ ಶೋ ಮಾಡಲಾಗುವುದು. ಆ ರೋಡ್‌ಶೋದಲ್ಲಿ ಮಾಜಿ ಪ್ರಧಾನಿಗಳಾದ ಎಚ್.ಡಿ. ದೇವೇಗೌಡರನ್ನು ತೆರೆದ ವಾಹನದಲ್ಲಿ ಕರೆದುಕೊಂಡು ಹೋಗಲಾಗುವುದು. ಈ ಸಮಾವೇಶದಲ್ಲಿ ಹತ್ತು ಲಕ್ಷ ಜನ ಸೇರಲಿದ್ದಾರೆ ಎಂದರು.

SCROLL FOR NEXT