ರಾಜ್ಯ

ಹವಾಮಾನ ವೈಪರೀತ್ಯ: ಕೆಐಎಯಲ್ಲಿ ವಿಮಾನ ಹಾರಾಟದಲ್ಲಿ ವ್ಯತ್ಯಯ, ಕೆಲಕಾಲ ಪ್ರಯಾಣಿಕರು ತಬ್ಬಿಬ್ಬು!

Manjula VN

ಬೆಂಗಳೂರು: ಹವಾಮಾನ ವೈಪರೀತ್ಯದಿಂದಾಗಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ವಿಮಾನ ಹಾರಾಟದಲ್ಲಿ ವ್ಯತ್ಯಯಗಳು ಕಂಡು ಬಂದ ಹಿನ್ನೆಲೆಯಲ್ಲಿ ಕೆಲಕಾಲ ಪ್ರಯಾಣಿಕರು ತಬ್ಬಿಬ್ಬಾಗಿದ್ದರು.

ವಿಮಾನ ನಿಲ್ದಾಣದಲ್ಲಿ ಭಾನುವಾರ ಬೆಳಿಗ್ಗೆ ಹಲವು ವಿಮಾನಗಳ ನಿರ್ಗಮನದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ವಿಳಂಬ ಕಂಡು ಬಂದಿತ್ತು. ಈ ನಡುವೆ ಕೋಲ್ಕತ್ತಾದಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ ವಿಮಾನವನ್ನು ಕೊಯಮತ್ತೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಮಾಡಲಾಗಿತ್ತು.

ಬೆಳಿಗ್ಗೆ 6.40 ರಿಂದ 8.15 ರ ನಡುವೆ ವಿಮಾನಗಳ ನಿರ್ಗಮನದಲ್ಲಿ ವಿಳಂಬ ಕಂಡು ಬಂದಿತ್ತು ಎಂದು ವಿಮಾನ ನಿಲ್ದಾಣದ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ.

ದೆಹಲಿ, ಅಲಹಾಬಾದ್, ಚೆನ್ನೈ, ವಿಜಯವಾಡ, ಹೈದರಾಬಾದ್, ರಾಯ್‌ಪುರಕ್ಕೆ ತೆರಳುವ ವಿಮಾನಗಳಲ್ಲಿ ವಿಳಂಬಗಳು ಕಂಡು ಬಂದಿತ್ತು.

ಇಂಡಿಗೋ ವಿಮಾನವು ತನ್ನ ಪ್ರಯಾಣವನ್ನು ಪೂರ್ಣಗೊಳಿಸಲು 5 ಗಂಟೆ 11 ನಿಮಿಷಗಳನ್ನು ತೆಗೆದುಕೊಂಡಿತು, ಇದು ನಿಗದಿತ ಸಮಯಕ್ಕಿಂತ ಎರಡು ಪಟ್ಟು ಹೆಚ್ಚಾಗಿತ್ತು ಎಂದು ತಿಳಿದುಬಂದಿದೆ.

ನಿಗದಿತ ಸಮಯಕ್ಕಿಂತ 16 ನಿಮಿಷ ಮುಂಚಿತವಾಗಿ ಕೋಲ್ಕತ್ತಾ ವಿಮಾನ ನಿಲ್ದಾಣದಿಂದ ವಿಮಾನ ಹೊರಟಿದ್ದು, ಆದಾಗ್ಯೂ, ಹವಾಮಾನ ವೈಪರೀತ್ಯದಿಂದಾಗಿ ವಿಮಾನವು ಕೊಯಮತ್ತೂರು ವಿಮಾನ ನಿಲ್ದಾಣದಲ್ಲಿ  ಲ್ಯಾಂಡ್ ಆಗುವಂತಾಯಿತು ಎಂದು ವೆಬ್ ಸೈಟ್ ನಲ್ಲಿ ತಿಳಿಸಲಾಗಿದೆ.

ಇಂಡಿಗೋ ವಿಮಾನ ವಿಳಂಬವಾಗಿರುವುದನ್ನು ಬೆಂಗಳೂರು ವಿಮಾನ ನಿಲ್ದಾಣದ ಮೂಲಗಳು ಖಚಿತಪಡಿಸಿವೆ.

“ಬೆಂಗಳೂರಿನಲ್ಲಿ ಹವಾಮಾನ ವೈಪರೀತ್ಯ ಕಂಡು ಬಂದ ಹಿನ್ನೆಲೆಯಲ್ಲಿ ವಿಮಾನವನ್ನು ಕೊಯಿಮತ್ತೂರಿನಲ್ಲಿ ಲ್ಯಾಂಡ್ ಮಾಡಬೇಕಾಯಿತು. ನಂತರ ವಿಮಾನವು ಬೆಳಗ್ಗೆ 9.03ಕ್ಕೆ ಬೆಂಗಳೂರಿಗೆ ಬಂದಿಳಿತು ಎಂದು ಮೂಲಗಳು ತಿಳಿಸಿವೆ. ಈ ಸಂಬಂಧ ಇಂಡಿಗೋ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

SCROLL FOR NEXT