ರಾಜ್ಯ

ಕೊಪ್ಪಳದಲ್ಲಿ 100 ಆಹಾರ ಸಂಸ್ಕರಣಾ ಘಟಕಗಳ ಸ್ಥಾಪನೆ: ಸಿಎಂ ಬೊಮ್ಮಾಯಿ

Nagaraja AB

ಗಂಗಾವತಿ: ಕೊಪ್ಪಳ ಜಿಲ್ಲೆಯಲ್ಲಿ 100 ಆಹಾರ ಸಂಸ್ಕರಣಾ ಘಟಕ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಗಂಗಾವತಿಯಲ್ಲಿಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು,  ರೈತರು ಬೆಳೆದ ಬೆಳೆಗಳು ಸ್ಥಳೀಯ ಮಟ್ಟದಲ್ಲಿ ಸಂಸ್ಕರಣಗೊಂಡು, ಬ್ರ್ಯಾಂಡ್ ನೇಮ್ ಇರುವ ಮಾರುಕಟ್ಟೆ ಹಾಗೂ ರೈತನ ಬೆಳೆಗೆ ಉತ್ತಮ ಬೆಲೆ ದೊರಕಲು ಅನುಕೂಲವಾಗಲಿದೆ ಎಂದರು. 

ಕೊಪ್ಪಳ ಏತನೀರಾವರಿ ಯೋಜನೆಗೆ ಕಾಯಕಲ್ಪ : ಕೊಪ್ಪಳ ಜಿಲ್ಲೆ ಏತ ನೀರಾವರಿಯನ್ನು ನಾರಾಯಣಪುರ ಯೋಜನೆಗೆ ಜೋಡಿಸಿ, ಗೋದಾವರಿಯ  1.8 ಟಿಎಂಸಿ  ನೀರನ್ನು ಇಲ್ಲಿನ ಏತನೀರಾವರಿಗೆ ನೀಡಲಾಯಿತು. ಹಿಂದಿನ ಸರ್ಕಾರಗಳ ಅವಧಿಯಲ್ಲಿ ಸಾಕಾರಗೊಳ್ಳದಿದ್ದ ಕೊಪ್ಪಳ ಏತನೀರಾವರಿ ಯೋಜನೆಗಳಿಗೆ ನಮ್ಮ ಸರ್ಕಾರದ ಅವಧಿಯಲ್ಲಿ ಕಾಯಕಲ್ಪ ಕಾಣುತ್ತಿದೆ. ಗಂಗಾವತಿ ತಾಲ್ಲೂಕಿನಲ್ಲಿ 41 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಮಂಜೂರಾತಿ ನೀಡಲಾಗಿದೆ ಎಂದರು. 

ಮುಳವಾಡಿ, ಚಿಮ್ಮಲಗಿ, ಗುತ್ತಿಬಸವಣ್ಣ ಏತನೀರಾವರಿ ಯೋಜನೆಗಳಿಗೆ ಕಾಯಕಲ್ಪ ನೀಡಲಾಗುತ್ತಿದೆ. ತುಂಗಭದ್ರಾ ಯೋಜನೆ, ತುಂಗಾ ಮೇಲ್ದಂಡೆ ಯೋಜನೆ, ಸಿಂಗಟಾಲೂರು ಯೋಜನೆ, ಎನ್ ಎಲ್ ಬಿ ಸಿ ಯೋಜನೆಗಳಿಂದ  ಸುಮಾರು 7 ಲಕ್ಷ ಎಕರೆ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ತಿಳಿಸಿದರು. 

ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಕೊಪ್ಪಳ ಜಿಲ್ಲೆಯಲ್ಲಿ 1.57 ಲಕ್ಷ ರೈತರಿಗೆ 456 ಕೋಟಿ ರೂ. ಪಾವತಿಯಾಗಿದೆ ಎಂದು ತಿಳಿಸಿದ ಸಿಎಂ ಬೊಮ್ಮಾಯಿ,  ರೈತರಿಗೆ ಜೀವವಿಮೆ ಸೌಲಭ್ಯ ಜಾರಿಗೊಳಿಸಿದ್ದು,ರೈತರ ಉತ್ತಮ ಆರೋಗ್ಯ ಚಿಕಿತ್ಸೆಗೆ ಯಶಸ್ವಿನಿ ಯೋಜನೆಯನ್ನು ಪುನರಾರಂಭಿಸಲಾಗಿದೆ. ಆವರ್ತ ನಿಧಿಯನ್ನು 3600 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ. ರೈತವಿದ್ಯಾನಿಧಿ ಯೋಜನೆಯಡಿ ರೈತರ ಮಕ್ಕಳ ಶಿಕ್ಷಣಕ್ಕೆ ಆರ್ಥಿಕ ನೆರವು ನೀಡಲಾಗುತ್ತಿದೆ. ದೇಶದ ಜಿಡಿಪಿ ಶೇ. 6 ರಿಂದ ಶೇ.8 ರಷ್ಟಿದ್ದರೆ,  ರಾಜ್ಯದ ಜಿಡಿಪಿ ಶೇ. 9 ರಷ್ಟಿದೆ. ಈಗ ಕರ್ನಾಟಕದ ತಲಾವಾರು ಆದಾಯ 3.47 ಲಕ್ಷವಾಗಿದೆ. ರಾಜ್ಯದ ಜನ ಶ್ರೀಮಂತರಾದರೆ, ರಾಜ್ಯ ಶ್ರೀಮಂತವಾಗುತ್ತದೆ ಎಂದರು.

ಪಿಯುಸಿಯಿಂದ ಡಿಗ್ರಿವರೆಗೆ ಉಚಿತ ಶಿಕ್ಷಣ- 8 ಲಕ್ಷ ವಿದ್ಯಾರ್ಥಿಗಳಿಗೆ ಲಾಭ :

ಸ್ತ್ರೀ ಸಾಮರ್ಥ್ಯ ಯೋಜನೆ ಹಾಗೂ ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆಗಳಡಿ ಮಹಿಳೆಯರು ಹಾಗೂ ಯುವಕರ ಸ್ವ ಸಹಾಯ ಸಂಘಗಳಿಗೆ ಆರ್ಥಿಕ ಸಹಾಯ, ಉತ್ಪನ್ನಗಳ ಯೋಜನೆ, ತರಬೇತಿ, ಮಾರುಕಟ್ಟೆ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಸರ್ಕಾರಿ ಕಾಲೇಜುಗಳಲ್ಲಿ  ಎಲ್ಲ ವಿದ್ಯಾರ್ಥಿಗಳಿಗೂ ಪಿಯುಸಿ ಯಿಂದ ಡಿಗ್ರಿವರೆಗೂ ಉಚಿತ ಶಿಕ್ಷಣವನ್ನು ನೀಡುವ ಯೋಜನೆ ರೂಪಿಸಲಾಗಿದ್ದು, ಇದರಿಂದ ರಾಜ್ಯದ ಸುಮಾರು 8 ಲಕ್ಷ ವಿದ್ಯಾರ್ಥಿಗಳಿಗೆ ಲಾಭವಾಗಲಿದೆ. ಸುಮಾರು ದುಡಿಯುವ ಮಹಿಳೆಯರಿಗೆ ಉಚಿತ ಬಸ್ ಪಾಸ್ ಸೌಲಭ್ಯ, ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ, ಭೂರಹಿತ ಕೃಷಿ ಮಹಿಳಾ ಕಾರ್ಮಿಕರಿಗೆ 1000 ರೂ. ಗಳ ಭತ್ಯೆ ನೀಡುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು.

ಎಸ್ ಸಿ ಎಸ್ ಟಿ, ಹಿಂದುಳಿದ ವರ್ಗದವರ ಏಳಿಗೆಗೆ ಕ್ರಮ:

ಈ ಹಿಂದೆ ಸಾಮಾಜಿಕ ನ್ಯಾಯ ಕೇವಲ ಬಾಯಿ ಮಾತಿನಲ್ಲಿತ್ತು. ನಮ್ಮ ಸರ್ಕಾರ ಎಸ್ ಸಿ ಎಸ್ ಟಿ ಮೀಸಲಾತಿಯನ್ನು ಹೆಚ್ಚಿಸಲಾಯಿತು. ಎಸ್ ಸಿ ಎಸ್ ಟಿ, ಹಿಂದುಳಿದ ವರ್ಗದವರ ಏಳಿಗೆಗೆ ಹತ್ತು ಹಲವಾರು ಕ್ರಮಗಳನ್ನು ಸರ್ಕಾರ ಕೈಗೊಂಡಿದೆ.  ಪ್ರಧಾನಿ ಮೋದಿಯವರ ಸಬ್ ಕಾ ಸಾಥ್ , ಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಯಾಸ್ ಆಶಯದಂತೆ ರಾಜ್ಯ ಸರ್ಕಾರ ನಡೆದುಕೊಳ್ಳುತ್ತಿದೆ. ಹಿಂದುಳಿದ ವರ್ಗದವರು, ಕುಶಲಕರ್ಮಿಗಳು ಸೇರಿದಂತೆ ಕಾಯಕ ಸಮಾಜದವರಿಗೆ ‘ಕಾಯಕ’ ಯೋಜನೆಯಡಿ 50 ಸಾವಿರ ರೂ.ಗಳ ಧನಸಹಾಯ ನೀಡಲಾಗುತ್ತಿದೆ ಎಂದರು. 

350 ಕೋಟಿ ರೂ. ವೆಚ್ಚದಲ್ಲಿ ಕುರಿಗಾಹಿಗಳ ಸಂಘಕ್ಕೆ 20 ಕುರಿ 1 ಮೇಕೆ ನೀಡುವ ಜೊತೆಗೆ ಮನೆ ಮತ್ತುಶೆಡ್ ಗಳ ನಿರ್ಮಾಣಕ್ಕೆ ಸಹಾಯ ಮಾಡಲಾಗುತ್ತಿದೆ. 23 ಸಾವಿರ ಕುರಿಸಂಘಗಳಿಗೆ ಇನ್ನೊಂದು ವಾರದೊಳಗೆ ಹಣ ಬಿಡುಗಡೆ ಮಾಡಲಾಗುವುದು.  ರೈತಕಿಸಾನ ಸಮ್ಮಾನ್ ನಿಧಿ ಯೋಜನೆಯ  ಕೊನೆಯ ಕಂತಾದ 999 ಕೋಟಿ ರೂ.ಗಳನ್ನು ಸಧ್ಯದಲ್ಲಿಯೇ ಬಿಡುಗಡೆ ಮಾಡಲಾಗುವುದು. ಸರ್ಕಾರ ಜನರ ಶ್ರೇಯೋಭಿವೃದ್ಧಿಗೆ ನಿರಂತರವಾಗಿ ಕೆಲಸ ಮಾಡಲಿದೆ ಎಂದು ಅವರು ತಿಳಿಸಿದರು.
 

SCROLL FOR NEXT